Connect with us

KARNATAKA

ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ನಿಧನ

ಕಾರವಾರ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ ಅವರು ಇಂದು ಸಂಜೆ ಅವರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹಾಲಕ್ಕಿ ಬುಡಕಟ್ಟು ಜನಾಂಗದ ಮಹಿಳೆಯಾಗಿರುವ ಇವರಿಗೆ ಸುಬ್ರಾಯ ಮತ್ತು ಸೋಮಿ ಎಂಬ ಇಬ್ಬರು ಮಕ್ಕಳಿದ್ದಾರೆ. ನಾಲ್ಕು ಜನ ಮೊಮ್ಮಕ್ಕಳನ್ನು ಅಗಲಿದ್ದಾರೆ.

ವರ್ಷಕ್ಕೆ ಮೂವತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ತುಳಸಿ ಗೌಡ ಅವರು ನೆಟ್ಟು ಬೆಳಸುತ್ತಿದ್ದರು. ಈವರೆಗೆ ಲಕ್ಷಾಂತರ ಗಿಡಗಳನ್ನು ಬೆಳಸಿ ಪಾಲನೆ ಮಾಡಿದ ಕೀರ್ತಿ ಇವರದ್ದು. ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ಇಬ್ಬರು ಮಕ್ಕಳನ್ನು ಸಾಕಲು ಅರಣ್ಯ ಇಲಾಖೆಯಲ್ಲಿ ದಿನಗೂಲಿ ಕೆಲಸಕ್ಕೆ ಸೇರಿದ ಇವರು ಅಲ್ಲಿಯೇ ಗಿಡಗಳ ಆರೈಕೆ ಪೋಷಣೆ ಮಾಡುತ್ತಾ ಇಲಾಖೆಯಿಂದ ಹೇಳದಿದ್ದರೂ ಸಂಬಳ ಬಯಸದೇ ಸೇವೆ ರೂಪದಲ್ಲಿ ಅರಣ್ಯ ಬೆಳಸುವ ಕಾಯಕಕ್ಕೆ ಕೈ ಹಾಕಿದರು. ಇದಲ್ಲದೇ ಅರಣ್ಯದಲ್ಲಿ ಅಳವಿನಂಚಿನಲ್ಲಿ ಇರುವ ಹಲವು ಕಾಡು ಗಿಡಗಳ ಬೀಜ ಸಂಗ್ರಹಿಸಿ ಸಸಿಗಳನ್ನು ಮಾಡಿ ಕಾಡಿನಲ್ಲಿ ನೆಡುವ ಮೂಲಕ ಸದ್ದಿಲ್ಲದೇ ಹಸಿರು ಕ್ರಾಂತಿ ಮಾಡಿದರು.

ಹಾಲಕ್ಕಿ ಜನಾಂಗದಲ್ಲಿ ಹುಟ್ಟಿದ ಇವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಸಿರು ಬೆಳಸುವ ಕಾಯಕ ಮಾಡುತ್ತಾ ಸಾಗಿದರು. ಅಳವಿನಂಚಿನ ಸಸ್ಯಗಳನ್ನು ಬೆಳಸಿದ ಕೀರ್ತಿ ಇವರದ್ದು. ಇವರ ಸಾಧನೆ ಗುರುತಿಸಿ ಕೇಂದ್ರ ಸರ್ಕಾರ ಸಹ 2021 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ನಾಳೆ ಹಾಲಕ್ಕಿ ಜನಾಂಗದ ವಿಧಿವಿಧಾನಗಳ ಮೂಲಕ ಹೊನ್ನಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *