SPORTS
ಕೊರೊನಾ ಭೀತಿ ನಡುವಲ್ಲೇ ಇಂಗ್ಲೆಂಡ್- ಪಾಕ್ ಕ್ರಿಕೆಟ್ ಸರಣಿ !
ನವದೆಹಲಿ, ಜೂನ್ 28, ಮಹಾಮಾರಿ ಕೊರೊನಾ ಜಗತ್ತಿನಾದ್ಯಂತ ಆವರಿಸಿರುವಾಗಲೇ ಕ್ರಿಕೆಟ್ ಜನಕ ಇಂಗ್ಲೆಂಡಿನಲ್ಲಿ ಕ್ರಿಕೆಟ್ ಆಟವಾಡಲು ವೇದಿಕೆ ರೆಡಿಯಾಗಿದೆ. ಪಾಕಿಸ್ಥಾನ ತಂಡದ ಜೊತೆ ಜುಲೈ 13ರಿಂದ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಪಾಕ್ ಆಟಗಾರರು ಗಂಟುಮೂಟೆ ಕಟ್ಟಿಕೊಂಡು ಲಂಡನ್ ಗೆ ಹೊರಟಿದ್ದಾರೆ.
20 ಮಂದಿಯ ತಂಡ ಕರಾಚಿಯಲ್ಲಿ ಕೋವಿಡ್ ಟೆಸ್ಟ್ ಮಾಡಿಕೊಂಡು ಲಂಡನ್ ಗೆ ತೆರಳಿದೆ. ಅಲ್ಲಿ 14 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ ಬಳಿಕ ಡರ್ಬಿಶೈರ್ ಕ್ರಿಕೆಟ್ ಗ್ರೌಂಡಿನತ್ತ ತೆರಳಲು ಅನುಮತಿ ಸಿಗಲಿದೆ. ಕರಾಚಿಯಲ್ಲಿ ನಡೆದ ಪರೀಕ್ಷೆಯಲ್ಲಿ ಹತ್ತು ಮಂದಿ ಆಟಗಾರರಿಗೆ ಪಾಸಿಟಿವ್ ಬಂದಿದ್ದು ಅವರು ಪಾಕ್ ನೆಲದಲ್ಲಿಯೇ ಹೋಮ್ ಕ್ವಾರಂಟೈನ್ ಇರಲಿದ್ದಾರೆ. ಇನ್ನು ನೆಗೆಟಿವ್ ಬಂದ ನಂತ್ರವಷ್ಟೇ ಇಂಗ್ಲೆಂಡ್ ತೆರಳಲಿದ್ದಾರೆ.
ಇಂಗ್ಲೆಂಡಿನಲ್ಲಿ ಕ್ವಾರಂಟೈನ್ ಅವಧಿಯಲ್ಲೂ ಸಾಮಾಜಿಕ ಅಂತರ ಕಾಪಾಡುವುದರ ಜೊತೆಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಪಾಕಿಸ್ಥಾನ ತಂಡ ಇಂಗ್ಲೆಂಡಿನಲ್ಲಿ ಮೂರು ಟೆಸ್ಟ್ ಮತ್ತು ಮೂರು ಟಿ20 ಸಿರೀಸ್ ಗಳಲ್ಲಿ ಪಾಲ್ಗೊಳ್ಳಲಿದೆ. ಇಂಗ್ಲೆಂಡ್ ತಂಡ ಮುಂದಿನ ತಿಂಗಳಲ್ಲಿ ವೆಸ್ಟ್ ಇಂಡೀಸ್ ಜೊತೆಗೂ ಟೆಸ್ಟ್ ಕ್ರಿಕೆಟ್ ಆಡಲು ನಿಗದಿಯಾಗಿತ್ತು. ಆದರೆ, ಈಗ ಜುಲೈ ಕೊನೆ ವರೆಗೂ ಅದರ ವೇಳಾಪಟ್ಟಿ ನಿಗದಿಪಡಿಸುವುದಿಲ್ಲ ಎನ್ನಲಾಗುತ್ತಿದೆ. ಪಾಕ್ ಪ್ರವಾಸ ಜೂನ್ ತಿಂಗಳಲ್ಲಿ ಆಗಬೇಕಿದ್ದರೂ, ಕೊರೊನಾದಿಂದಾಗಿ ವಿಳಂಬವಾಗಿತ್ತು. ಈಗ ಕೊರೊನಾ ಮಧ್ಯೆಯೇ ಕ್ರಿಕೆಟ್ ಆಟಕ್ಕೆ ತಂಡಗಳು ರೆಡಿಯಾಗುತ್ತಿದ್ದು ಆಡುವಾಗಲೂ ಮಾಸ್ಕ್ ಮತ್ತು ಸೋಶಿಯಲ್ ಡಿಸ್ಟೆನ್ಸ್ ಕಡ್ಡಾಯ ಮಾಡುತ್ತಾರೆಯೇ ಅನ್ನೋದನ್ನು ಹೇಳಿಕೊಂಡಿಲ್ಲ.