ಗೋಕರ್ಣ : ಉಡುಪಿಯ ಕಾರ್ಕಳದ ಹುಡುಗಿಯೊಬ್ಬಳ ಕವರ್ ಡ್ರೈವ್ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ , ಈಗ ಕರ್ನಾಟಕದ ಮತ್ತೊಂದು ಸ್ಥಳ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತನ್ನ ಫೇಸ್‌ಬುಕ್ ಪುಟದಲ್ಲಿ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ಕ್ರಿಕೆಟ್ ಆಡುತ್ತಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದು, ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಬಾಂಗ್ಲಾದೇಶ ಮೂಲದ ಪರಾಗ್ ಸರ್ಕೆರ್ ಎಂಬ ಫೋಟೊಗ್ರಾಫರ್ ಈ ಫೋಟೊ ಕ್ಲಿಕ್ಕಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಅನೇಕ ಬೀಚ್ ಗಳಿದ್ದು ಅಲ್ಲಿ ಕ್ರಿಕೇಟ್ ಮೈದಾನಗಳ ಕೊರತೆಯಿಂದಾಗಿ ಬೀಚ್ ಗಳಲ್ಲಿ ಕ್ರಿಕೆಟ್ ಆಡುವುದು ಸಾಮಾನ್ಯ. ಹಾಗೆ ಗೋಕರ್ಣದಲ್ಲಿರುವ ಕುಡ್ಲೆ ಬೀಚ್‌ನಲ್ಲಿ ಯುವಕರು ಕ್ರಿಕೆಟ್ ಆಡುತ್ತಿರುವ ಚಿತ್ರವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದು, ಇದು ಉತ್ತರ ಕನ್ನಡದ ಯುವಕರ ಖುಷಿ ಇಮ್ಮಡಿಸಿದೆ.
ಐಸಿಸಿ ಚಿತ್ರ ಹಂಚಿಕೊಂಡ ಬಳಿಕ ಇಲ್ಲಿನ ಯುವಕರು ಪುಳಕಿತಗೊಂಡಿದ್ದಾರೆ. ಸೋಮವಾರ ಸಂಜೆ ವೇಳೆಗೆ 24 ಸಾವಿರ ಜನ ಈ ಫೋಟೊ ಲೈಕ್ ಮಾಡಿದ್ದು, 381 ಕಾಮೆಂಟ್ ಮಾಡಿದ್ದಾರೆ. 253 ಜನ ಹಂಚಿಕೊಂಡಿದ್ದಾರೆ.