LATEST NEWS
ಎಚ್ಚರ…! ಯೋಧರ ನಕಲಿ ಗುರತಿನ ಚೀಟಿ ಉಪಯೋಗಿಸಿ ಆನ್ ಲೈನ್ ವಂಚನೆ
ಎಚ್ಚರ…! ಯೋಧರ ನಕಲಿ ಗುರತಿನ ಚೀಟಿ ಉಪಯೋಗಿಸಿ ಆನ್ ಲೈನ್ ವಂಚನೆ
ಮಂಗಳೂರು ಅಗಸ್ಟ್ 28: ಯೋಧರ ಹೆಸರು ಹೇಳಿಕೊಂಡು ಆನ್ ಲೈನ್ ವಂಚನೆ ನಡೆಸುತ್ತಿರುವ ಜಾಲವೊಂದು ಮಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಕಾರ್ಯಾಚರಿಸುತ್ತಿದೆ. ಒಎಲ್ಎಕ್ಸ್ ಸೇರಿದಂತೆ ಹಲವು ಸೈಟ್ ಗಳಲ್ಲಿ ವಾಹನ ಮಾರಾಟಕ್ಕಿದೆ ಎಂದು ಜಾಹೀರಾತಿನ ಜೊತೆಗೆ ಮೊಬೈಲ್ ನಂಬರ್ ನಮೂದಿಸಿಕೊಂಡಿರುವ ಈ ಜಾಲ ಗ್ರಾಹಕನನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
ಜಾಹೀರಾತಿನಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾರಾಟಕ್ಕಿರುವ ವಾಹನದ ಬಗ್ಗೆ ವಿಚಾರಿಸುವ ಸಂದರ್ಭದಲ್ಲಿ ಕರೆ ಸ್ವೀಕರಿಸುವ ವ್ಯಕ್ತಿ ತಾನು ಮಂಗಳೂರು, ಬೆಂಗಳೂರು, ಮುಂಬೈ ಹೀಗೆ ಎಲ್ಲಾ ವಿಮಾನ ನಿಲ್ದಾಣಗಳ ಹೆಸರು ಹೇಳಿ, ತಾನು ಸಿ.ಐ.ಎಸ್.ಎಫ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ನಂಬಿಸುತ್ತಾ, ತನಗೆ ಬೇರೆಡೆಗೆ ವರ್ಗಾವಣೆಯಾಗಿರುವ ಕಾರಣಕ್ಕೆ ವಾಹನ ಮಾರುತ್ತಿರುವುದಾಗಿ ಹೇಳುತ್ತಾನೆ. ಕೇಳಿದ ತಕ್ಷಣವೇ ವಾಹನದ ಆರ್.ಸಿ, ಫೋಟೋ ಜೊತೆಗೆ ಭಾರತ ಸರಕಾರದ ಲಾಂಛನವಿರುವ ನಕಲಿ ಸೈನಿಕ ಗುರುತು ಪತ್ರವನ್ನೂ ಕಳುಹಿಸುತ್ತಾನೆ.
ಈ ಗುರುತಿನ ಪತ್ರ ನಿಜವಾಗಿಯೂ ಯಾವುದೋ ಸೈನಿಕನಿಗೆ ಸೇರಿದ್ದೋ, ಅಥವಾ ಸೈನಿಕನ ನಕಲಿ ಗುರುತಿನ ಚೀಟಿ ತಯಾರಿಸಿ ಬೇರೆ ಯಾರದೋ ಚಿತ್ರ ಅಂಟಿಸಿ ಮಾಡಿರುವುದೋ ಎನ್ನುವುದು ತಿಳಿಯದಾಗಿದೆ.
ಗ್ರಾಹಕನನ್ನು ಆತನ ಹತ್ತಿರದ ವಿಮಾನ ನಿಲ್ದಾಣಕ್ಕೆ ಬರಹೇಳಿ, ಮಾರಾಟ ಮಾಡುವ ವಾಹನವನ್ನು ಅಲ್ಲೇ ನೀಡುವುದಾಗಿ ಭರವಸೆಯನ್ನೂ ಮೂಡಿಸುತ್ತಾನೆ. ಅಲ್ಲದೆ ವಾಹನ ನೋಡುವ ಮೊದಲು ವಿಮಾನ ನಿಲ್ದಾಣದಿಂದ ಹೊರಬರುವ ಚೆಕ್ಕಿಂಗ್ ಹಣ 2000/ ರೂಪಾಯಿಯನ್ನು ಗೂಗಲ್ ಪೇ ಮೂಲಕ ಕಳುಹಿಸುವಂತೆ ನಂಬಿಸುತ್ತಾನೆ. ಸೈನಿಕನ ಗುರುತಿನ ಚೀಟಿ ಕಂಡ ತಕ್ಷಣ ಪ್ರಾಮಾಣಿಕನಾಗಿರಬೇಕು ಎನ್ನುವ ಕಾರಣಕ್ಕೆ ಕೆಲವರು ಈ ವಂಚಕರಿಗೆ ಹಣ ವರ್ಗಾಯಿಸಿದ್ದಾರೆ.
ದಿನಕ್ಕೆ ನೂರಕ್ಕೂ ಮಿಕ್ಕಿದ ಜನರಿಗೆ ವಂಚನೆ ನಡೆಸುತ್ತಿರುವ ಈ ಬೃಹತ್ ಜಾಲ,ತನ್ನ ವಂಚನೆಗಾಗಿ ದೇಶದ ಹೆಮ್ಮೆಯ ಸೈನಿಕರ ಹೆಸರನ್ನು ಬಳಸುತ್ತಿದ್ದಾರೆ. ಭಾರತೀಯ ಸೇನೆಯ ನಕಲಿ ಗುರುತಿನ ಚೀಟಿ ಈ ವಂಚಕರಿಗೆ ಸಿಗುತ್ತಿರುವುದು ಗಂಭೀರ ವಿಷಯವಾಗಿದ್ದು, ಉಗ್ರಗಾಮಿಗಳಿಗೂ ಇದನ್ನು ಉಪಯೋಗಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಗಮನಹರಿಸಿ ಈ ವಂಚನೆ ಜಾಲವನ್ನು ಭೇಧಿಸಬೇಕಿದೆ.