Connect with us

LATEST NEWS

ಮೂರು ದಿನಗಳ ಕಾಲ ದಟ್ಟ ಅರಣ್ಯದಲ್ಲಿ ಕಳೆದ ವೃದ್ಧ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಘಟನೆ….

ಪುತ್ತೂರು ಅಕ್ಟೋಬರ್ 6: ಮನೆಯಿಂದ ನಾಪತ್ತೆಯಾಗಿದ್ದ ವೃದ್ಧನೊಬ್ಬ ದಟ್ಟ ಅರಣ್ಯದಲ್ಲಿ ಪತ್ತೆಯಾದ ಘಟನೆ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಶಾಂತಿಗುಡ್ಡೆ ಸಮೀಪದ ಕಾಡುಮನೆ ನಿವಾಸಿ 82 ವರ್ಷದ ಅಣ್ಣು ಪೂಜಾರಿ ಕಳೆದ ಅಕ್ಟೋಬರ್ 1 ರಂದು ನಾಪತ್ತೆಯಾಗಿದ್ದರು.

ಈ ಸಂಬಂಧ ಮನೆ ಮಂದಿ ಬೆಳ್ತಂಗಡಿ ಪೋಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಈ ಸಂಬಂಧ ವೃದ್ಧನ ಹುಡುಕಾಟಕ್ಕೆ ತೆರಳಿದ ಯುವಕರ ತಂಡಕ್ಕೆ ವೃದ್ಧ ಅಣ್ಣು ಪೂಜಾರಿ ಕುದುರೆಮುಖ ಅರಣ್ಯ ವ್ಯಾಪ್ತಿಗೊಳಪಟ್ಟ ಕಾಡಿನಲ್ಲಿ ಪತ್ತೆಯಾಗಿದ್ದಾರೆ. ನಾಪತ್ತೆಯಾದ ಹಿನ್ನಲೆಯಲ್ಲಿ  ಸ್ಥಳೀಯರು ಹಾಗೂ ಮನೆಮಂದಿ ಊರು ತುಂಬಾ ಹುಡುಕಾಟ ನಡೆಸಿದರೂ ವೃದ್ಧನ ಪತ್ತೆಯಾಗಿರಲಿಲ್ಲ. ಬಳಿಕ ಮಂಗಳೂರು ಎನ್.ಡಿ.ಆರ್.ಎಫ್. ಮತ್ತು ಶ್ವಾನದಳಕ್ಕೆ ದೂರು ನೀಡಲಾಗಿತ್ತು.

ಮಿತ್ತಬಾಗಿಲು ಗ್ರಾ.ಪಂ. ಉಪಾಧ್ಯಕ್ಷ ವಿನಯಚಂದ್ರ, ಮಾಜಿ ಸದಸ್ಯ ವಿಜಯಗೌಡ ಸ್ಥಳೀಯರಾದ ಸಂದೀಪ್ ಪೂಜಾರಿ, ಸುರೇಂದ್ರ ಪೂಜಾರಿ, ತಿಮ್ಮಪ್ಪ ಪೂಜಾರಿ ಸೇರಿದಂತೆ 6೦ ಕ್ಕೂ ಅಧಿಕ ಯುವಕರು ಅರಣ್ಯಾಧಿಕಾರಿಗಳ ಅನುಮತಿಯಂತೆ 7 ತಂಡಗಳಾಗಿ ಹುಡುಕಿದ್ದಾರೆ.

ಹುಡುಕಾಟ ಫಲವಾಗಿ ಮನೆಯಿಂದ 1೦ ಕಿ.ಮೀ. ದೂರದ ದಟ್ಟ ಅರಣ್ಯ ಮಧ್ಯೆ ಇರುವ ಕಾಡುಮನೆ ಕುಕ್ಕಾಡಿ ಎಂಬಲ್ಲಿ ಅಣ್ಣು ಪೂಜಾರಿ ಕಲ್ಲಿನ ಮೇಲೆ ಕುಳಿತಿರುವುದನ್ನು ಯುವಕರ ತಂಡ ಪತ್ತೆ ಮಾಡಿದೆ. ಮೂರು ದಿನಗಳ ಕಾಲ ದಟ್ಟ ಕಾಡಿನ ಮಧ್ಯೆ ಊಟ ನೀರಿಲ್ಲದೆ ಅಣ್ಣು ಪೂಜಾರಿ ಒಂಟಿಯಾಗಿ ಕಾಡಿನಲ್ಲಿ ಕಳೆದಿದ್ದರು.

ಆನೆ,ಚಿರತೆ, ಕಾಡುಕೋಣ, ವಿವಿಧ ಪ್ರಕಾರದ ಹಾವುಗಳ ವಾಸ ಸ್ಥಾನವಾಗಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಈ ವೃದ್ಧ ಮೂರು ರಾತ್ರಿ ಹೇಗೆ ಕಳೆದರು ಎನ್ನುವುದೇ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಮನೆಯಿಂದ ಹೊರಗೆ ಬಂದ ಅಣ್ಣು ಪೂಜಾರಿ ವಯೋ ಸಂಬಂಧಿ ಮರೆವಿನ ಕಾರಣದಿಂದಾಗಿ ಮತ್ತೆ ಮನೆಗೆ ಸೇರಲಾರದೆ ಕಾಡಿನ ಮಧ್ಯೆ ಸೇರಿದ್ದರು. ಚಿಕ್ಕಂದಿನಿಂದಲೇ ಕಾಡಿನ ಮಧ್ಯೆಯೇ ಬೆಳೆದಿದ್ದ ಅಣ್ಣು‌ ಪೂಜಾರಿಗೆ ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಇದ್ದ ಹೆಚ್ಚಿನ ಅರಿವು ಈ‌ ಸಮಯದಲ್ಲಿ ನೆರವಿಗೆ ಬಂದಿದೆ.

Facebook Comments

comments