LATEST NEWS
MRPL ನ ತೈಲ ಸಾಗಾಣಿಕೆ ಪೈಪ್ ಲೈನ್ ನಲ್ಲಿ ಸೋರಿಕೆ ಆತಂಕದಲ್ಲಿ ಸ್ಥಳೀಯರು

MRPL ನ ತೈಲ ಸಾಗಾಣಿಕೆ ಪೈಪ್ ಲೈನ್ ನಲ್ಲಿ ಸೋರಿಕೆ ಆತಂಕದಲ್ಲಿ ಸ್ಥಳೀಯರು
ಮಂಗಳೂರು ಅಗಸ್ಟ್ 1: ಎಂಆರ್ ಪಿಎಲ್ ನಿಂದ ಮಂಗಳೂರಿನ ಎನ್ ಎಂಪಿಟಿ ಬಂದರಿಗೆ ಸಾಗಣೆಯಾಗುವ ಪೈಪ್ ಲೈನ್ ನಲ್ಲಿನ ಪೆಟ್ರೋ ಕೆಮಿಕಲ್ ತೈಲ ಸೋರಿಕೆಯಾಗಿರುವ ಘಟನೆ ನಡೆದಿದೆ. ಬೈಕಂಪಾಡಿ ಬಳಿಯ ಜೋಕಟ್ಟೆ ಬಳಿ ಸೋರಿಕೆ ಕಂಡುಬಂದಿದ್ದು , ಸ್ಥಳೀಯರು ದೂರು ಹೇಳಿಕೊಂಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪಣಂಬೂರಿನ ಕುದುರೆಮುಖ ಕಂಪೆನಿ ಸಮೀಪದಿಂದ ಫಲ್ಗುಣಿ ನದಿ ತೀರವಾಗಿ ಜೋಕಟ್ಟೆ ಹೋಗುವ ಒಳ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ಮೂರು ದಿನಗಳಿಂದ ಈ ಪ್ರದೇಶದಲ್ಲಿ ಪೈಪ್ ಲೈನ್ ನಲ್ಲಿ ಪೆಟ್ರೋ ಕೆಮಿಕಲ್ ತೈಲ ಸೋರಿಕೆಯಾಗುತ್ತಿದ್ದರೂ ನಿನ್ನೆ ರಾತ್ರಿ ಎಂಆರ್ ಪಿಎಲ್ ಕಂಪೆನಿಯವರ ಗಮನಕ್ಕೆ ಬಂದಿದೆ ಎಂದು ಹೇಳಲಾಗಿದೆ.

ಸೋರಿಕೆಯಾಗುವ ತೈಲ ಅಂತರ್ಜಲ ಸೇರುವುದಲ್ಲದೆ, ಈ ತೈಲದ ಕೊಳವೆ ಫಲ್ಗುಣಿ ನದಿ ದಡದಲ್ಲಿ ಹಾದು ಹೋಗುವುದರಿಂದ ನದಿಗೆ ಮಲಿನ ಸೇರುವ ಆತಂಕ ವ್ಯಕ್ತವಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಪೆಟ್ರೋ ಕೆಮಿಕಲ್ ಸೋರುತ್ತಿದ್ದರೂ, ಸೋರಿಕೆ ತಪ್ಪಿಸುವ ಕೆಲಸ ನಡೆದಿಲ್ಲ ಎನ್ನಲಾಗುತ್ತಿದೆ.
ಎಂಆರ್ ಪಿಎಲ್ ಅಧಿಕಾರಿಗಳು ಈ ಬಗ್ಗೆ ಮುಂಜಾಗ್ರತೆ ವಹಿಸಬೇಕಿದ್ದರೂ, ಪರಿಸರ ಮಾಲಿನ್ಯ ಘಟಕದ ನಿರ್ಲಕ್ಷ್ಯದಿಂದಾಗಿ ಕನಿಷ್ಠ ಸೋರಿಕೆ ಪಾಯಿಂಟ್ ಗುರುತಿಸುವ ಕೆಲಸ ನಡೆದಿಲ್ಲ. ಕಳೆದ ಹಲವು ದಿನಗಳಿಂದ ಹೀಗೆ ಸೋರಿಕೆಯಾಗುತ್ತಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇದೆ.