LATEST NEWS
ಗಡಿಪಾರು ಪಟ್ಟಿಗೆ ಆಕ್ಷೇಪ – ಎಸ್ಪಿ, ಕಮಿಷನರ್ ಭೇಟಿ ಮಾಡಿದ ಬಿಜೆಪಿ ನಿಯೋಗ

ಮಂಗಳೂರು ಜೂನ್ 03 : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ ಹಿನ್ನಲೆ ವಿವಿಧ ಸಂಘಟನೆಗಳ ಸುಮಾರು 36 ಮಂದಿ ಗಡಿಪಾರಿಗೆ ಜಿಲ್ಲೆಯ ಪೊಲೀಸ್ ಇಲಾಖೆ ಮುಂದಾಗಿದೆ. ಈ ಪಟ್ಟಿಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಹೆಸರುಗಳನ್ನು ವಿನಾಕಾರಣ ಸೇರಿಸಿದೆ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನಲೆ ಇಂದು ಬಿಜೆಪಿ ಶಾಸಕರ ನಿಯೋಗ ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ದ.ಕ.ಜಿಲ್ಲಾ ಎಸ್ಪಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.
ಅದಕ್ಕಿಂತ ಮೊದಲು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ದ.ಕ ಜಿಲ್ಲೆಯ ಆರು ಮಂದಿ ಬಿಜೆಪಿ ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್, ಭಾಗೀರಥಿ ಮುರುಳ್ಯ, ವೇದವ್ಯಾಸ ಕಾಮತ್ ಸೇರಿದಂತೆ ಎಂಎಲ್‌ಸಿ ಕಿಶೋರ್ ಕುಮಾರ್ ಪುತ್ತೂರು ಸೇರಿ ಕೆಲ ನಾಯಕರು ಭಾಗಿಯಾಗಿದ್ದರು. ಈ ತುರ್ತು ಸಭೆಯಲ್ಲಿ ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ. ಹಾಗೂ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿಯವರನ್ನು ಭೇಟಿಯಾಗುವ ನಿರ್ಧಾರ ಕೈಗೊಳ್ಳಲಾಯಿತು.

ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ನೇತೃತ್ವದ ಬಿಜೆಪಿಯ ನಿಯೋಗವು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಅವರನ್ನು ಮಂಗಳವಾರ ಭೇಟಿ ಮಾಡಿತು. ಗಡೀಪಾರು ಕ್ರಮ ಹಾಗೂ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಿದ ಬಗ್ಗೆ ಆಕ್ಷೇಪ ಸಲ್ಲಿಸಿತು.
ಈಚೆಗೆ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು, ಮುಖಂಡರನ್ನು ಗಡೀಪಾರು ಮಾಡುವ ಪ್ರಸ್ತಾವ ಕೈಬಿಡಬೇಕು. ಕಾರ್ಯಕರ್ತರ ಮನೆಗೆ ರಾತ್ರಿ ವೇಳೆ ತೆರಳಿ ವಿಚಾರಣೆ ನಡೆಸುವುದನ್ನು ನಿಲ್ಲಿಸಬೇಕು ಎಂದೂ ನಿಯೋಗವು ಆಗ್ರಹಿಸಿತು.