LATEST NEWS
ಅಕ್ರಮ ಬಾಕ್ಸೈಟ್ ಗಣಿಗಾರಿಕೆ ವಿರುದ್ದ ಕ್ರಮ – ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್ ಹಠಾತ್ ವರ್ಗಾವಣೆ
ಮಂಗಳೂರು ಅಕ್ಟೋಬರ್ 14: ಅಕ್ರಮ ಬಾಕ್ಸೈಟ್ ಗಣಿಗಾರಿಕೆ ವಿರುದ್ದ ಕಠಿಣ ಕ್ರಮ ತೆಗೆದುಕೊಂಡಿದ್ದ ಮಂಗಳೂರು ಉಪವಿಭಾಗ ಉಪವಿಭಾಗಾಧಿಕಾರಿ ಮದನ್ ಮೋಹನ್ ಸಿ. ಅವರನ್ನು ಹಠಾತ್ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಮೂಲಕ ಅಕ್ರಮ ಬಾಕ್ಸೈಟ್ ಗಣಿಗಾರಿಕೆಯಲ್ಲಿ ಪ್ರಭಾವಿಗಳ ಕೈವಾಡ ಇರುವುದು ಗೋಚರಿಸುತ್ತಿದೆ. ಸದ್ಯ ಮದನ್ ಮೋಹನ್ ಅವರ ಸ್ಥಾನಕ್ಕೆ ಮಂಗಳೂರು ಸ್ಮಾರ್ಟ್ ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ರವಿಚಂದ್ರ ನಾಯಕ್ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ಈ ಕುರಿತಂತೆ ಆದೇಶ ಹೊರಡಿಸಿರುವ ರಾಜ್ಯ ಸರಕಾರ ಕರ್ನಾಟಕ ಆಡಳಿತ ನ್ಯಾಯಮಂಡಳಿ ಹೊರಡಿಸಿದ ಆದೇಶವನ್ನು ಜಾರಿಗೆ ತರುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಇತ್ತೀಚೆಗೆ ಮದನ್ ಮೋಹನ್ ನೇತೃತ್ವದ ಅಧಿಕಾರಿಗಳ ತಂಡ ನಗರದಲ್ಲಿನ ಅಕ್ರಮ ಬಾಕ್ಸೈಟ್ ಗಣಿಗಾರಿಕೆಯಲ್ಲಿ ತೊಡಗಿದ್ದ ಲಾರಿಗಳು ಸೇರಿದಂತೆ 30 ವಾಹನಗಳನ್ನು ವಶಪಡಿಸಿಕೊಂಡಿತ್ತು.
ಇದು ಈ ಚಟುವಟಿಕೆಯಲ್ಲಿ ಭಾಗಿಯಾಗಿರುವ ಪ್ರಭಾವಿ ವ್ಯಕ್ತಿಗಳು ಈ ದಾಳಿಯಿಂದಾಗಿ ಕೋಪಗೊಂಡಿದ್ದರು. ಬಳಿಕ ಈ ಪ್ರಭಾವಿ ವ್ಯಕ್ತಿಗಳಿಂದ ಮದನ್ ಮೋಹನ್ ಅವರನ್ನು ವರ್ಗಾವಣೆ ಮಾಡುವಂತಹ ಪ್ರಯತ್ನಗಳು ಕೂಡಾ ನಡೆದಿದ್ದವು ಎಂದು ಹೇಳಲಾಗಿದೆ. ಅವರನ್ನು ಯಾವ ಸಂದರ್ಭದಲ್ಲೂ ವರ್ಗಾಯಿಸುವ ಸಾಧ್ಯತೆಯಿದೆ ಎಂಬ ಊಹಾಪೋಹಗಳು ಇದ್ದವು. ಬಾಕ್ಸೈಟ್ ಲಾಬಿಗೆ ಸರ್ಕಾರ ಮಣಿದಿದೆಯೇ ಎಂದು ಶಂಕೆ ವ್ಯಕ್ತವಾಗಿದೆ