National
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ; ಸಿಎಂ ರಾಜೀನಾಮೆಗೆ ಬಿಜೆಪಿ ಪಟ್ಟು

ತಿರುವನಂತಪುರ, ಆಗಸ್ಟ್ 1: ಕೇರಳದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಿಎಂ ಕಚೇರಿಯ ನೇರ ಪಾಲುದಾರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಪಿಣರಾಯಿ ವಿಜಯನ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಹೋರಾಟ ಕೈಗೆತ್ತಿಕೊಂಡಿದೆ.
ಹೋರಾಟದ ಭಾಗವಾಗಿ ಮಾಜಿ ಸಂಸದ ಓ.ರಾಜಗೋಪಾಲ್, ಇಂದು ತಿರುವನಂತಪುರದಲ್ಲಿ ಒಂದು ದಿನದ ಉಪವಾಸ ನಡೆಸಿದ್ದಾರೆ. ಅಲ್ಲದೆ, ಮುಂದಿನ 18 ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಬಿಜೆಪಿ ಕಾರ್ಯಕರ್ತರು ಹೋರಾಟ ನಡೆಸಲಿದ್ದಾರೆ ಎಂದು ರಾಜಗೋಪಾಲ್ ತಿಳಿಸಿದ್ದಾರೆ.
ನಾಲ್ಕು ದಿನಗಳ ಹಿಂದಷ್ಟೇ ಕಾಸರಗೋಡು ಬಿಜೆಪಿ ಘಟಕದ ವತಿಯಿಂದ ಪ್ರತೀ ಗ್ರಾಮದಲ್ಲಿ ಮೌನ ಪ್ರತಿಭಟನೆ ನಡೆದಿತ್ತು. ಪ್ರತೀ ಗ್ರಾಮದಲ್ಲಿ ಬೂತ್ ಮಟ್ಟದ ಬಿಜೆಪಿ ಪ್ರಮುಖರು ಸೇರಿ ಮೌನ ಪ್ರತಿಭಟನೆ ನಡೆಸಿದ್ದರು. ಇದೀಗ ರಾಜ್ಯದಾದ್ಯಂತ ಬಿಜೆಪಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಮುಂದಿಟ್ಟು ಹೋರಾಟ ಕೈಗೆತ್ತಿಕೊಳ್ಳುವ ಸೂಚನೆ ನೀಡಿದೆ.

ಇದೇ ವೇಳೆ, ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಆಗಸ್ಟ್ 21 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಎರ್ನಾಕುಲಂ ಜಿಲ್ಲಾ ಕೋರ್ಟ್ ಆದೇಶ ಮಾಡಿದೆ. ಎನ್ಐಎ ಕಸ್ಟಡಿಯಲ್ಲಿದ್ದ ವೇಳೆ ವಿಚಾರಣೆ ನಡೆಸಿದಾಗ, ಮಹತ್ವದ ವಿಚಾರಗಳನ್ನು ಆರೋಪಿಗಳು ಬಾಯಿಬಿಟ್ಟಿದ್ದರು.
ಕಳೆದ ಒಂದು ವರ್ಷದಲ್ಲಿ 250 ಕೆಜಿಗೂ ಹೆಚ್ಚು ಬಂಗಾರವನ್ನು ಕೊಲ್ಲಿ ರಾಷ್ಟ್ರಗಳಿಂದ ಅಕ್ರಮವಾಗಿ ಭಾರತಕ್ಕೆ ತರಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿತ್ತು. ತಿರುವನಂತಪುರದ ಯುಎಇ ದೂತಾವಾಸ ಕಚೇರಿ ಹೆಸರಲ್ಲಿ ಚಿನ್ನ ರವಾನೆ ಆಗುತ್ತಿದ್ದುದರಿಂದ ಕಳ್ಳಸಾಗಣೆ ಗುಟ್ಟಾಗಿಯೇ ನಡೆಯುತ್ತಿತ್ತು. ಅಲ್ಲದೆ, ಈ ಚಿನ್ನವನ್ನು ವಿವಿಧೆಡೆ ಕರಗಿಸಿ, ಅದರ ಹಣವನ್ನು ಉಗ್ರಗಾಮಿ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು ಎನ್ನುವ ಮಾಹಿತಿಯೂ ಲಭಿಸಿತ್ತು.

ADVERTISEMENT
ಹೀಗಾಗಿ ಈ ಪ್ರಕರಣ ಹೈ ಪ್ರೊಫೈಲ್ ರಾಜಕಾರಣಿಗಳ ನಂಟನ್ನೂ ಬಹಿರಂಗ ಪಡಿಸಿದ್ದರಿಂದ ಆಡಳಿತಾರೂಢ ಎಡರಂಗ ಸರಕಾರ ಇರಿಸುಮುರಿಸಿಗೆ ಒಳಗಾಗಿದೆ. ಪ್ರಕರಣಕ್ಕೆ ತೇಪೆ ಹಚ್ಚುವ ಸಲುವಾಗಿ ಸ್ವಪ್ನಾ ಜೊತೆ ನಂಟು ಹೊಂದಿದ್ದ ಸಿಎಂ ಕಚೇರಿ ಕಾರ್ಯದರ್ಶಿಯನ್ನು ಅಮಾನತು ಮಾಡಲಾಗಿತ್ತು.