Connect with us

National

ಭಾರತದ ಸೆಲೆಬ್ರಿಟಿ ರಾಜಕಾರಣಿ ಅಮರ್ ಸಿಂಗ್ ನಿಧನ

ಲಕ್ನೋ, ಆಗಸ್ಟ್ 1: ಸಮಾಜವಾದಿ ಪಾರ್ಟಿಯ ಮಾಜಿ ಮುಖಂಡ, ಭಾರತೀಯ ರಾಜಕಾರಣದ ಸೆಲೆಬ್ರಿಟಿ ರಾಜಕಾರಣಿ ಅಮರ್ ಸಿಂಗ್ (64) ಕೊನೆಯುಸಿರೆಳೆದಿದ್ದಾರೆ. ಸುದೀರ್ಘ ಕಾಲದ ಅಸ್ವಾಸ್ಥ್ಯದ ಬಳಿಕ ಸಿಂಗಾಪುರದಲ್ಲಿ ಎರಡನೇ ಬಾರಿಗೆ ಕಿಡ್ನಿ ಕಸಿಗೆ ಒಳಗಾಗಿದ್ದ ಅಮರ್ ಸಿಂಗ್, ಇಂದು ಸಂಜೆ ಅಲ್ಲಿಯೇ ಅಸುನೀಗಿದ್ದಾರೆ.

ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ರಾಜಕಾರಣ ಪ್ರವೇಶ ಮಾಡಿದ್ದ ಅಮರ್ ಸಿಂಗ್, 1990 ರಿಂದ 2010ರ ನಡುವೆ ಸಂಚಲನ ಮೂಡಿಸಿದ್ದ ಅಪರೂಪದ ರಾಜಕಾರಣಿ. ಹೆಚ್ಚಾಗಿ ಬಿಗ್ ಬಿ ಅಮಿತಾಬ್ ಬಚ್ಚನ್, ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಜೊತೆ ಕಾಣಿಸಿಕೊಳ್ಳುತ್ತಿದ್ದುದರಿಂದ ರಾಜಕೀಯದಲ್ಲಿ ಸೆಲೆಬ್ರಿಟಿಯಾಗಿಯೂ ಹೆಸರು ಪಡೆದಿದ್ದರು. 1996ರಲ್ಲಿ ಸಮಾಜವಾದಿ ಪಾರ್ಟಿಯಿಂದಲೇ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾಗಿದ್ದ ಅಮರ್ ಸಿಂಗ್, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿಯ ಉತ್ತುಂಗಕ್ಕೂ ಕಾರಣರಾಗಿದ್ದರು. ಆದರೆ, 2010ರಲ್ಲಿ ಮಾಜಿ ಸಿಎಂ ಮುಲಾಯಂ ಸಿಂಗ್ ಜೊತೆ ಮುನಿಸಿಕೊಂಡು ಸಮಾಜವಾದಿ ಪಾರ್ಟಿಯಿಂದ ಉಚ್ಚಾಟನೆಗೆ ಒಳಗಾಗಿದ್ದರು. 2016ರಲ್ಲಿ ಮತ್ತೆ ಸಮಾಜವಾದಿ ಪಾರ್ಟಿಯ ಬೆಂಬಲದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅಮರ್ ಸಿಂಗ್ ಸಮಾಜವಾದಿ ಪಾರ್ಟಿಯಲ್ಲಿದ್ದರೂ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಜೊತೆಗೂ ವ್ಯಾವಹಾರಿಕ ಸಂಬಂಧ ಹೊಂದಿದ್ದರು. ಪ್ರಮುಖವಾಗಿ ಲಿಕ್ಕರ್ ಬಿಸಿನೆಸ್ ಹೊಂದಿದ್ದ ಅಮರ್ ಸಿಂಗ್, ಅದರ ಜೊತೆ ರೋಡ್ ಕಾಂಟ್ರಾಕ್ಟ್, ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲೂ ಉದ್ಯಮ ಹೊಂದಿದ್ದರು. ಹೀಗಾಗಿ ಭಾರತೀಯ ರಾಜಕಾರಣದ ಹೈಪ್ರೊಫೈಲ್ ರಾಜಕಾರಣಿಗಳೊಂದಿಗೆ ವ್ಯವಹಾರ ಇತ್ತು. ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಅರುಣಾಚಲ ಪ್ರದೇಶ ಹೀಗೆ ಹಲವು ರಾಜ್ಯಗಳಲ್ಲಿ ಅಮರ್ ಸಿಂಗ್ ವಹಿವಾಟು ಹೊಂದಿದ್ದರು.

ಅಮರ್ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಅಮರ್ ಸಿಂಗ್ ಭಾರತೀಯ ರಾಜಕಾರಣದಲ್ಲಿ ಒಬ್ಬ ಅಪರೂಪದ ವ್ಯಕ್ತಿತ್ವ. ಕಳೆದ ಎರಡು ದಶಕಗಳಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳಲ್ಲಿ ಅಮರ್ ಸಿಂಗ್ ಕಾಣಿಸಿಕೊಂಡಿದ್ದರು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.