LATEST NEWS
ಕೇರಳದಲ್ಲಿ ನೋರೋವೈರಸ್ ಕಾಟ …ಎಚ್ಚರದಿಂದ ಇರಲು ಸರಕಾರ ಸೂಚನೆ
ಕೇರಳ : ನಿಫಾ , ಕೊರೊನಾ ಬಳಿಕ ಕೇರಳದಲ್ಲಿ ಇದೀಗ ಮತ್ತೊಂದು ವೈರಲ್ ಕಾಟ ಆರಂಭವಾಗಿದ್ದು, ಕೇರಳದ ವಯನಾಡ್ ಜಿಲ್ಲೆಯಲ್ಲಿ 13 ನೋರೊವೈರಸ್ ಪ್ರಕರಣಗಳು ದೃಢಪಟ್ಟ ಹಿನ್ನಲೆ ಸಾರ್ವಜನಿಕರಿಗೆ ಕೇರಳ ಸರಕಾರ ಎಚ್ಚರದಿಂದ ಇರಲು ಸೂಚಿಸಿದೆ.
ವಾಂತಿ ಹಾಗೂ ಅತಿಸಾರಕ್ಕೆ ಕಾರಣವಾಗುವ ಈ ಅಪರೂಪದ ಸೋಂಕು, ವಯನಾಡ್ ಜಿಲ್ಲೆಯ ಪೂಕೊಡೆ ಪಶುವೈದ್ಯಕೀಯ ಕಾಲೇಜಿನ 13 ವಿದ್ಯಾರ್ಥಿಗಳಲ್ಲಿ ದೃಢಪಟ್ಟಿದೆ. ಸದ್ಯ ಸೊಂಕು ಹರಡುವಿಕೆಯನ್ನು ನಿಯಂತ್ರಿಸಲಾಗಿದೆ. ಈ ಅವಧಿಯಲ್ಲಿ ಬೇರೆ ಯಾರಿಗೂ ಸೋಂಕು ತಗುಲಿರುವ ಪ್ರಕರಣ ವರದಿಯಾಗಿಲ್ಲ.
ಪಶುವೈದ್ಯಕೀಯ ಕಾಲೇಜಿನ ಅಧಿಕಾರಿಗಳ ಪ್ರಕಾರ, ಕಾಲೇಜು ಕ್ಯಾಂಪಸ್ ಹೊರಗಿನ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಈ ಸೋಂಕು ಮೊದಲು ಕಾಣಿಸಿಕೊಂಡಿತ್ತು. ಆರೋಗ್ಯಾಧಿಕಾರಿಗಳು, ಕ್ಷಿಪ್ರಗತಿಯಲ್ಲಿ ಮಾದರಿಯನ್ನು ಸಂಗ್ರಹಿಸಿ ಆಲಪುಳದಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಿಕೊಟ್ಟಿದ್ದರು.
ಕೇರಳ ಆರೋಗ್ಯ ಸಚಿವೆ ಈ ಕುರಿತಂತೆ ಮಾಹಿತಿ ನೀಡಿದ್ದು ನೋರೊವೈರಸ್ ಹರಡುವುದನ್ನು ತಡೆಯಲು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಚಿವೆ ಸೂಚಿಸಿದ್ದಾರೆ. ಸದ್ಯಕ್ಕೆ ಯಾವುದೇ ಅಪಾಯ ಇಲ್ಲವಾದರೂ ಪ್ರತಿಯೊಬ್ಬರು ಕೂಡ ಜಾಗರೂಕತೆಯಿಂದ ಇರಬೇಕು ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.