Connect with us

    DAKSHINA KANNADA

    ಪುಟಾಣಿಗಳಿಗೆ ಬಯಲಲ್ಲೇ ಶೌಚ ಮಾಡುವ ಗತಿ, ಮಂಗಳೂರು ಮಹಾನಗರ ಪಾಲಿಕೆಗಿಲ್ಲವೇ ಮತಿ

    ಪುಟಾಣಿಗಳಿಗೆ ಬಯಲಲ್ಲೇ ಶೌಚ ಮಾಡುವ ಗತಿ, ಮಂಗಳೂರು ಮಹಾನಗರ ಪಾಲಿಕೆಗಿಲ್ಲವೇ ಮತಿ

    ಮಂಗಳೂರು, ಅಕ್ಟೋಬರ್ 18: ಇತ್ತೀಚೆಗಷ್ಚೆ ಬಯಲು ಶೌಚಮುಕ್ತ ನಗರ ಪಾಲಿಕೆ ಪ್ರಶಸ್ತಿ ಪಡೆದುಕೊಂಡ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅಂಗನವಾಡಿಯೊಂದರ ಪುಟಾಣಿಗಳು ಅಂಗನವಾಡಿಯ ಅಂಗಳವನ್ನೇ ಶೌಚಾಲಯವನ್ನಾಗಿ ಬಳಸಿಕೊಳ್ಳುತ್ತಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.

    ಮಹಾನಗರಪಾಲಿಕೆ ವಾರ್ಡ್ ನಂಬರ್ 13 ಕುಂಜತ್ತ್ ಬೈಲ್ ನ ಬಸವ ನಗರದಲ್ಲಿ ಸುಮಾರು 15 ವರ್ಷಗಳಿಂದ ಶೌಚಗೃಹವಿಲ್ಲದೆ ಈ ಅಂಗನವಾಡಿ ಕೇಂದ್ರ ಕಾರ್ಯಾಚರಿಸುತ್ತಿದೆ. 15 ವರ್ಷಗಳಿಂದ ಈ ಅಂಗನವಾಡಿ ಕೇಂದ್ರದ ಮಕ್ಕಳು ಬಯಲನ್ನೆ ಶೌಚಗೃಹವಾಗಿ ಬಳಸುತಿದ್ದರೂ ಮಹನಾಗರಪಾಲಿಕೆ ಆಡಳಿತಕ್ಕಾಗಲೀ, ಜಿಲ್ಲಾ ಪಂಚಾಯತಿಗಾಗಲೀ ಸಂಬಂಧಿತ ಅಧಿಕಾರಿಗಳಾಗಲೀ ಗೋಚರಿಸದಿರುವುದು ಅಚ್ಚರಿ ಮೂಡಿಸಿದೆ. ಬಯಲು ಶೌಚಮುಕ್ತ ನಗರ ಪಾಲಿಕೆ ಪ್ರಶಸ್ತಿ ಸ್ವೀಕರಿಸಿದ ಮಹಾನಗರಪಾಲಿಕೆಗಂತೂ ಇದೊಂದು ದೊಡ್ಡ ಹಿನ್ನಡೆ.

    ಈ ಅಂಗನವಾಡಿ ಕೇಂದ್ರ ಖಾಸಗಿ ಕಟ್ಟಡದಲ್ಲಿದೆ. ಕ್ರೈಸ್ತ ಸಂಸ್ಥೆಯೊಂದು ಸುಮಾರು 15 ವರ್ಷಗಳಿಂದ ಈ ಕಟ್ಟಡವನ್ನು ಇಲಾಖೆಗೆ ಅಂಗನವಾಡಿ ನಡೆಸಲು ಬಾಡಿಗೆಗೆ ನೀಡಿದೆ. ಈ ಕೇಂದ್ರದಲ್ಲಿ 40 ರಷ್ಟು ಮಕ್ಕಳು, ಓರ್ವ ಶಿಕ್ಷಕಿ ಹಾಗೂ ಓರ್ವ ಸಹಾಯಕಿಯಿದ್ದಾರೆ. ಮಕ್ಕಳು ಅಂಗನವಾಡಿ ಕೇಂದ್ರದ ಮುಂಭಾಗದಲ್ಲೇ ಇರುವ ಅಂಗಣದಲ್ಲೇ ಶೌಚ ಮಾಡುತ್ತಾರೆ. ಅಕ್ಕಪಕ್ಕದಲ್ಲಿ ಮನೆಗಳಿವೆಯಾದರೂ , ಪ್ರತಿಸಲವೂ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗಿಬರುವುದು ಸಹಾಯಕಿಯರಿಗೆ ಕಷ್ಟಸಾಧ್ಯವಾಗಿದ್ದು, ಜೊತೆಗೆ ಮನೆಯವರಿಗೂ ಇದೊಂದು ಸಮಸ್ಯೆಯಾಗಿದ್ದರಿಂದ ಮಕ್ಕಳಿಗೆ ಬಯಲೇ ಗತಿ ಎಂಬಂತಾಗಿದೆ.

    ಕೇಂದ್ರದಲ್ಲಿ ಬಡವರ ಮಕ್ಕಳಿದ್ದಾರೆ ಎನ್ನುವ ನಿರ್ಲಕ್ಷವೇ

    ಹೆತ್ತವರು ಮಕ್ಕಳನ್ನು ಅಂಗನವಾಡಿಗೆ ಬಿಡುವ ಮೊದಲು ಮನೆಯಲ್ಲಿಯೇ ಶೌಚಮಾಡಿಸಿ ಕರೆದುಕೊಂಡು ಬಿಡುತ್ತಾರೆ. ಅಂಗನವಾಡಿಗೆ ಬರುವವರು ಬಡವರ ಮಕ್ಕಳಾಗಿದ್ದರಿಂದ ಜಿಲ್ಲಾಡಳಿತ ಈ ರೀತಿ ನಿರ್ಲಕ್ಷ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇಷ್ಟು ವರ್ಷ ಅಂಗನವಾಡಿ ನಡೆಯುತ್ತಿದ್ದರೂ ಇಷ್ಟು ವರ್ಷದೊಳಗೆ ಸ್ವಂತ ಕಟ್ಟಡವಾದರೂ ಮಾಡಬಹುದಿತ್ತು. ಬಯಲು ಶೌಚಮುಕ್ತ ನಗರ, ಬಯಲು ಶೌಚಮುಕ್ತ ಜಿಲ್ಲೆ ಎಂದು ಪ್ರಶಸ್ತಿ ಪಡೆಯಲು ಬೆಂಗಳೂರಿಗೆ ಹೋಗುವ ಜನಪ್ರತಿನಿಧಿಗಳಿಗೆ ಮಕ್ಕಳ ಸಮಸ್ಯೆ ಇನ್ನೂ ಯಾಕೆ ಗೋಚರಿಸಿಲ್ಲ, ಇದು ಮಕ್ಕಳಿಗೆ ಮಾತ್ರವಲ್ಲದೆ ಶಿಕ್ಷಕಿ ಹಾಗೂ ಸಹಾಯಕಿಯರಿಗೂ ಸಮಸ್ಯೆಯಾಗಿದೆ ಎನ್ನುತ್ತಾರೆ.

    ಜಿಲ್ಲಾ ಪಂಚಾಯತ್ ಜವಾಬ್ದಾರಿ – ಮೇಯರ್

    ಮಂಗಳೂರು ಮೇಯರ್ ಕವಿತಾ ಸನಿಲ್ ಪ್ರಕಾರ ಅಂಗನವಾಡಿ ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿದೆ ಆದರೆ ಅಲ್ಲಿ ಅಭಿವೃದ್ದಿ ಕಾರ್ಯ ಮಾಡಲು ಪಾಲಿಕೆಗೆ ಅವಕಾಶ ಇಲ್ಲ. ಜಿಲ್ಲಾ ಪಂಚಾಯತಿ ಅಡಿಯಲ್ಲಿ ಬರುವ ಇಲಾಖೆಗೆ ಸಂಬಂಧಿಸಿದ ಕಟ್ಟಡಗಳನ್ನು ಅವರೇ ನಿರ್ವಹಿಸಬೇಕು. ಜಿಲ್ಲಾ ಪಂಚಾಯತ್ ಶಾಲೆಯ ಮಾಡಿನ ಒಂದು ಹೆಂಚನ್ನು ತೆಗೆಯಲು ಪಾಲಿಕೆಗೆ ಅಧಿಕಾರವಿಲ್ಲ ಎನ್ನುವ ಮೇಯರ್ ಶಾಲೆಯ ಹೆಂಚನ್ನು ಮುಟ್ಟಲು ಹೋಗುವ ಬದಲು ಪಾಲಿಕೆಯ ವತಿಯಿಂದ ಒಂದು ಶೌಚಾಲಯವನ್ನು ಕಟ್ಟಿಕೊಡಲು ಯಾವ ಕಾನೂನು ಅಡ್ಡಿ ಬರುತ್ತಿದೆ ಎನ್ನುವುದನ್ನೂ ಸ್ಪಷ್ಟಪಡಿಸಬೇಕಿದೆ

    ಶೌಚಮುಕ್ತ ನಗರ ಪ್ರಶಸ್ತಿ ಪಡೆದಿದ್ದು ನಿಜ ಆದರೆ ನಾವು ಅದನ್ನು ಕೇಳಿ ಪಡೆದಿಲ್ಲ, ದೆಹಲಿಯ ಸಂಸ್ಥೆಯೊಂದು ಸರ್ವೆ ಮಾಡಿ ಮಂಗಳೂರು ಮತ್ತು ಮೈಸೂರು ಪಾಲಿಕೆಯನ್ನು ಪ್ರಶಸ್ತಿ ಆಯ್ಕೆ ಮಾಡಿದೆ. ಪಾಲಿಕೆಯ ಅಧಿಕಾರ ವ್ಯಾಪ್ತಿಗೆ ಬರುವುದಾದರೆ ಕೂಡಲೇ ಕ್ರಮಕೈಗೊಳ್ಳಬಹುದಿತ್ತು. ಆದರೂ ಜಿಲ್ಲಾಡಳಿತದ ಗಮನಕ್ಕೆ ತರುತ್ತೇನೆ ಎಂದು ಪ್ರತಿಕ್ರಿಯಿಸಿದರು.

    ಮೇಯರ್ ಬೆಂಗಳೂರಿಗೆ ತೆರಳಿ ಬಯಲು ಶೌಚಮುಕ್ತ ನಗರ ಎಂದು ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗುತ್ತದೆ. ಅದೇ ನಗರದ ಅಂಗನವಾಡಿಯೊಂದರಲ್ಲಿ ಶೌಚಗೃಹ ಇಲ್ಲ ಎಂದು ಹೇಳಿದಾಗ ಅದನ್ನು ಜಿಲ್ಲಾಪಂಚಾಯತ್ ತಲೆಗೆ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾರೆ. ಪ್ರಶಸ್ತಿ ತೆಗೆದುಕೊಳ್ಳಲು ಇರುವ ಮಾನದಂಡ ಏನು ಎಂದು ಸಾರ್ವಜನಿಕರು ಪ್ರಶ್ನೆ ಮಾಡಬೇಕು .

    ಮೇಯರ್ ಗೆ ತಾವು ತೆಗೆದುಕೊಂಡ ಪ್ರಶಸ್ತಿಗೆ ನ್ಯಾಯ ಒದಗಿಸಬೇಕು ಎಂಬ ಮನಸ್ಸಿದ್ದರೆ ತಕ್ಷಣ ನಗರದ ರಸ್ತೆ ಬದಿ ಸಾರ್ವಜನಿಕರು ಶೌಚ ಮಾಡದಂತೆ ನಿರ್ಬಂಧಿಸಬೇಕು , ನಗರ ವ್ಯಾಪ್ತಿಯ ಮಾರುಕಟ್ಟೆ, ಶಾಲೆ ಕಾಲೇಜಿು, ಅಂಗನವಾಡಿಗಳಲ್ಲಿ ಸುಸಜ್ಜಿತ ಶೌಚಗೃಹ ನಿರ್ಮಾಣಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply