LATEST NEWS
ಸಾಮಾಜಿಕ ಅಂತರ ಮರೆತ ಜನಪ್ರತಿನಿಧಿಗಳು
ಸಾಮಾಜಿಕ ಅಂತರ ಮರೆತ ಜನಪ್ರತಿನಿಧಿಗಳು
ಮಂಗಳೂರು ಮಾರ್ಚ್ 26: ಸಾಮಾಜಿಕ ಅಂತರವೇ ಮಾಹಾಮಾರಿ ಕರೋನಾದಿಂದ ಪಾರಾಗಲು ಇರುವ ಪ್ರಮುಖ ಮಾರ್ಗ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಪ್ರದಾನಿ ನರೇಂದ್ರ ಮೋದಿಯವರು ಕೂಡ ಆದಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಆದರೆ ಜನಪ್ರತಿನಿಧಿಗಳೇ ಸಾಮಾಜಿಕ ಅಂತರದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಕಂಡು ಬಂದಿದೆ.
ಭಾರತವೂ ಇಂದು ಕೊರೊನಾ ಹರಡುವ ಭೀತಿಯನ್ನು ಎದುರಿಸುತ್ತಿದ್ದು, ಈ ಕಾರಣಕ್ಕಾಗಿ ಇಡೀ ದೇಶದಲ್ಲಿ 21 ದಿನಗಳ ಲಾಕ್ ಡೌನ್ ಆದೇಶ ಜಾರಿಗೆ ತರಲಾಗಿದೆ. ಸಾಮಾಜಿಕ ಅಂತರವನ್ನು ಎಲ್ಲಾ ವ್ಯವಸ್ಥೆಗಳಲ್ಲೂ ಕಾಯ್ದುಕೊಳ್ಳುವ ಅನಿವಾರ್ಯತೆಯಿದ್ದರೂ, ಕೆಲವು ಕಡೆಗಳಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಈ ಅಂತರವನ್ನು ಕಾಯ್ದುಕೊಳ್ಳತ್ತಿಲ್ಲವೇ ಎನ್ನುವ ಸಂಶಯ ಮೂಡಲಾರಂಭಿಸಿದೆ.
ಸ್ವತಹ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಸಭೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಸಭೆ ನಡೆಸಿದ್ದರು. ಅಲ್ಲದೆ ಇದೀಗ ಸಾರ್ವಜನಿಕರೂ ತಮ್ಮ ಅಗತ್ಯ ಸಾಮಾಗ್ರಿಗಳ ಖರೀದಿ ಸಂದರ್ಭದಲ್ಲಿ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿರ್ದಿಷ್ಟ ಅಂತರವನ್ನು ಪರಸ್ಪರ ಕಾಯ್ದುಕೊಳ್ಳುತ್ತಿದ್ದಾರೆ.
ಪತ್ರಕರ್ತರೂ ಈ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ತಮ್ಮ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಆದರೆ ಈ ಅಂತರವನ್ನು ಕಾಯ್ದುಕೊಳ್ಳಲು ಜನರಿಗೆ ಸೂಚಿಸುವ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಗುಂಪು ಗುಂಪಾಗಿ ನಿಲ್ಲುತ್ತಿರುವ ದೃಶ್ಯಗಳು ಹರಿದಾಡುತ್ತಿವೆ. ಸಮಾಜಕ್ಕೆ ಬುದ್ಧಿ ಹೇಳುವ ಈ ಮಂದಿ ಮೊದಲು ತಾವು ಈ ನಿಯಮವನ್ನು ಪಾಲಿಸಿದರೆ ಉತ್ತಮ ಎನ್ನುವ ಅಭಿಪ್ರಾಯಗಳೂ ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದೆ.