ಫಲ್ಗುಣಿ ನದಿಗೆ ಬಿದ್ದು ಇಬ್ಬರು ಸಾವು

ಮಂಗಳೂರು ಮಾರ್ಚ್ 26: ಫಲ್ಗುಣಿ ನದಿಗೆ ಬಾಲಕ ಸೇರಿ ಇಬ್ಬರು ಆಕಸ್ಮಿಕವಾಗಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಇಂದು ಬೆಳಗ್ಗೆ ಕೊಡಿಂಗೇರಿ ಎಂಬಲ್ಲಿ ನಡೆದಿದೆ.

ಮೃತರನ್ನು ಶಿರ್ತಾಡಿ ಬಳಿಯ ಪಣಪಿಲ್ ದರ್ಖಾಸು ನಿವಾಸಿ ಮಹಾಬಲ ಪೂಜಾರಿ ಎಂಬವರ ಪುತ್ರ ವಾಸುದೇವ (22) ಮತ್ತು ಶಿರ್ತಾಡಿ ಗ್ರಾಮದ ಕೊಣಾಜೆ ಕೊಡಿಂಜ ನಿವಾಸಿ ಸಾಧು ಪೂಜಾರಿ ಅವರ ಪುತ್ರ ಇಶಾನ್ (8) ಎಂದು ಗುರುತಿಸಲಾಗಿದೆ.

ಅವರು ಹೊಸಂಗಡಿ ಗ್ರಾಮದ ಸುನೀಲ್ ಎಂಬವರ ಮನೆಗೆ ಹೋಗಿದ್ದು, ಇಂದು ಬೆಳಗ್ಗೆ ಸುನೀಲ್ ಹುಲ್ಲು ಕೀಳಲು ತೋಟದ ಕಡೆಗೆ ಹೋಗಿದ್ದರು. ಕೆಲವೇ ಹೊತ್ತಿನಲ್ಲಿ ಈ ಇಬ್ಬರೂ ಕೂಡ ಫಲ್ಗುಣಿ ನದಿ ಪಾತ್ರದಲ್ಲೇ ಇರುವ ತೋಟದ ಕಡೆಗೆ ಹೋಗಿದ್ದು, ನಂತರ ನಾಪತ್ತೆಯಾಗಿದ್ದರು.

ಹುಡುಕಾಡಿದಾಗ ಈ ಇಬ್ಬರೂ ಕೂಡ ತೋಟಕ್ಕೆ ತಾಗಿಕೊಂಡಂತೆ ಇರುವ ನದಿ ತೀರದ ಬಂಡೆ ಕಲ್ಲಿನ ಕೆಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.