LATEST NEWS
ಡಿಸೆಂಬರ್ 20 ರಂದು ಮುಸ್ಲಿಂ ಸಂಘಟನೆಗಳಿಂದ ಯಾವುದೇ ಪ್ರತಿಭಟನೆ ಇಲ್ಲ – ಪೊಲೀಸ್ ಆಯುಕ್ತ ಡಾ. ಪಿ.ಎಸ್ ಹರ್ಷ
ಡಿಸೆಂಬರ್ 20 ರಂದು ಮುಸ್ಲಿಂ ಸಂಘಟನೆಗಳಿಂದ ಯಾವುದೇ ಪ್ರತಿಭಟನೆ ಇಲ್ಲ
ಮಂಗಳೂರು ಡಿಸೆಂಬರ್ 18:ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಸಂದೇಶದಂತೆ ಡಿಸೆಂಬರ್ 20 ರ ಶುಕ್ರವಾರದಂದು ಮಂಗಳೂರಲ್ಲಿ ಯಾವುದೇ ಬೃಹತ್ ಪ್ರತಿಭಟನೆ ಇಲ್ಲ ಎಂದು ಪೊಲೀಸ್ ಆಯುಕ್ತ ಡಾ. ಪಿ.ಎಸ್ ಹರ್ಷ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಮೊಬೈಲ್ ಗಳಲ್ಲಿ ಡಿಸೆಂಬರ್ 20, 23 ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಮೆಸೇಜ್ ಗಳನ್ನು ರವಾನಿಸಲಾಗುತ್ತಿದ್ದು.ಮಸೇಜ್ ಗಳಲ್ಲಿರುವ ಸಂಘಟನೆಯ ಮುಖಂಡರುಗಳನ್ನು ನಾವು ಈಗಾಗಲೇ ಸಂಪರ್ಕಿಸಿದ್ದು ಡಿಸೆಂಬರ್ 20 ರಂದು ಮುಸ್ಲಿಂ ಸಂಘಟನೆಗಳಿಂದ ಯಾವುದೇ ಪ್ರತಿಭಟನೆಯನ್ನು ನಡೆಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ತಿದ್ದುಪಡಿ ಸಂಬಂಧಪಟ್ಟಂತೆ ಮಂಗಳೂರಲ್ಲಿ ಅನೇಕರು ಪ್ರತಿಭಟನೆಗೆ ಅವಕಾಶ ಕೇಳಿದ್ದಾರೆ.ನಾವು ಅಂತಹ ಅರ್ಜಿಗಳನ್ನು ಪರಿಶೀಲಿಸಿದ್ದೇವೆ. ಈಗಾಗಲೇ 8 ಅರ್ಜಿಗಳು ಪ್ರತಿಭಟನೆಗೆ ಅವಕಾಶ ಕೇಳಿವೆ. ಆದರೆ ಕೆಲವು ಸಂಘಟನೆಗಳು ಅನುಮತಿ ಇಲ್ಲದೇ ಪ್ರತಿಭಟನೆ ಮಾಡಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯನ್ನುಂಟು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ 38 ಮಂದಿ ವಿರುದ್ಧ ಕೇಸ್ ದಾಖಲಿಸಿದ್ದೇವೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಮೆಸೇಜ್ ಗಳ ಮೂಲಕ ಸಾಮರಸ್ಯ ಹಾಳು ಮಾಡಲು ಕೆಲವರು ಪ್ರಯತ್ನಿಸುತ್ತಿದ್ದು, ಇದೊಂದು ಸೂಕ್ಷ್ಮವಾದ ಸನ್ನಿವೇಶವಾಗಿದೆ. ಶಾಂತಿ ಕಾಪಾಡುವಂತೆ ಎಲ್ಲಾ ಧರ್ಮದ ಮುಖಂಡರಲ್ಲಿ ಮನವಿ ಮಾಡಿದ್ದೇವೆ ಎಂದು ಮಂಗಳೂರಲ್ಲಿ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಹೇಳಿದ್ದಾರೆ.