LATEST NEWS
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಿಸುವಲ್ಲಿ ಪೊಲೀಸರ ನಿರ್ಲಕ್ಷ್ಯ ಸಲ್ಲದು- ಜಿಲ್ಲಾಧಿಕಾರಿ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಿಸುವಲ್ಲಿ ಪೊಲೀಸರ ನಿರ್ಲಕ್ಷ್ಯ ಸಲ್ಲದು- ಜಿಲ್ಲಾಧಿಕಾರಿ
ಉಡುಪಿ, ಜುಲೈ 21 : ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿಕೊಳ್ಳುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ ಕುರಿತು ದೂರು ಬಂದಲ್ಲಿ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಲು ನೇರವಾಗಿ ಗೃಹ ಇಲಾಖೆಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ದೂರು ನೀಡಲು ಸಂಬಂದಪಟ್ಟ ಪೊಲೀಸ್ ಠಾಣೆಗೆ ತೆರಳಿದರೆ, ದೂರು ದಾಖಲಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಕುರಿತು , ಮಹಿಳಾ ಸಾಂತ್ವನ ಕೇಂದ್ರದ ಸದಸ್ಯರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ಶೀಘ್ರದಲ್ಲಿ ದೂರು ದಾಖಲಿಸಿ, ಸಂತ್ರಸ್ಥರಿಗೆ ನ್ಯಾಯ ಒದಗಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಇಲ್ಲವಾದಲ್ಲಿ ಸಂಬಂದಪಟ್ಟ ಪೊಲೀಸರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಇಲಾಖೆಗೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದರು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ, ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಸಾಂತ್ವನ ಕೇಂದ್ರದ ಸಿಬ್ಬಂದಿ ನೀಡುವ ವೇತನವನ್ನು ಹೆಚ್ಚಳ ಮಾಡುವ ಕುರಿತಂತೆ ಇಲಾಖೆಗೆ ಪತ್ರ ಬರೆಯುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಸಾಂತ್ವನ ಯೋಜನೆಯಡಿ ಜನವರಿ ಯಿಂದ ಜೂನ್ ವರೆಗೆ ಉಡುಪಿಯಲ್ಲಿ ಒಟ್ಟು 181 ಪ್ರಕರಣ ದಾಖಲಾಗಿದ್ದು, 65 ಇತ್ಯರ್ಥ ಪಡಿಸಿದ್ದು 116 ಬಾಕಿ ಇವೆ. ಕಾರ್ಕಳದಲ್ಲಿ 80 ಪ್ರಕರಣ ದಾಖಲಾಗಿದ್ದು, 25 ಇತ್ಯರ್ಥ ಪಡಿಸಿದ್ದು 55 ಬಾಕಿ ಇವೆ. ಕುಂದಾಪುರದಲ್ಲಿ 91 ಪ್ರಕರಣ ದಾಖಲಾಗಿದ್ದು, 34 ಇತ್ಯರ್ಥ ಪಡಿಸಿದ್ದು 57 ಬಾಕಿ ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಾಂತ್ವನ ಯೋಜನೆಯ ಕುರಿತು ಜಿಲ್ಲೆಯ ಮಹಿಳಾ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ . ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಹಯೋಗದಲ್ಲಿ ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಖಿ ಒನ್ ಸ್ಟಾಪ್ ಸೆಂಟರ್‍ನಲ್ಲಿ ಜನವರಿ ಯಿಂದ ಜೂನ್ ವರೆಗೆ ಒಟ್ಟು 88 ಪ್ರಕರಣಗಳು ದಾಖಲಾಗಿದ್ದು, 22 ಇತ್ಯರ್ಥಪಡಿಸಲಾಗಿದ್ದು, 2 ಸಮಾಲೋಚನೆಯಲ್ಲಿ ಮತ್ತು 64 ನ್ಯಾಯಾಲಯದಲ್ಲಿ ಬಾಕಿ ಇವೆ. ವರದಕ್ಷಿಣೆ ನಿಷೇದ ಕಾಯ್ದೆಯಡಿ ಒಟ್ಟು 10 ಪ್ರಕರಣಗಳಿದ್ದು, 3 ನ್ಯಾಯಲಯದಲ್ಲಿ ಮತ್ತು 7 ಪೊಲೀಸ್ ಇಲಾಖೆಯಲ್ಲಿ ಬಾಕಿ ಇವೆ, ಸ್ಥೈರ್ಯ ನಿಧಿ ಯೋಜನೆಯಡಿ 2 ಫಲಾನುಭವಿಗೆ ರೂ.50000/- ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಯಾವುದೇ ಬಾಲ್ಯ ವಿವಾಹ ನಡೆದ ಪ್ರಕರಣಗಳು ವರದಿಯಾಗಿಲ್ಲ, ಸಾಮೂಹಿಕ ವಿವಾಹ ನಡೆಯುವ ಸಂದರ್ಭದಲ್ಲಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಮತ್ತು ತಹಸೀಲ್ದಾರರು ಸ್ಥಳಕ್ಕೆ ತರಳಿ ವಯಸ್ಸಿನ ದೃಢೀಕರಣ ಮಾಡಿರುತ್ತಾರೆ, ಬಾಲ್ಯ ವಿವಾಹ ನಿಷೇಧದ ಕುರಿತಂತೆ ಧಾರ್ಮಿಕ ಮುಖಂಡರುಗಳಿಗೆ, ವಿವಿಧ ಕಲ್ಯಾಣ ಮಂಟಪದ ವ್ಯವಸ್ಥಾಪಕರಿಗೆ ತರಬೇತಿ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಅಭಿವೃದ್ದಿ ಇಲಾಖೆ ಅಧಿಕಾರಿಗಳು ತಿಳಿಸಿದರು.