LATEST NEWS
ಮೊಬೈಲ್ ಫೋನ್ ಕಳೆದು ಹೋದ್ರೆ ಇನ್ನು ಚಿಂತಿಸಬೇಕಿಲ್ಲ: ಸರ್ಕಾರದಿಂದಲೇ ಹೊಸ ತಂತ್ರಜ್ಞಾನ.!
ನವದೆಹಲಿ, ಮೇ 16: ನಿಮ್ಮ ಕಳೆದು ಹೋದ ಮೊಬೈಲ್ ಅನ್ನು ಟ್ರ್ಯಾಕ್ ಮಾಡಲು ಹಾಗೂ ಇತರರು ಆ ಫೋನ್‌ಗೆ ಪ್ರವೇಶ ಪಡೆಯುವುದನ್ನು ನಿರ್ಬಂಧಿಸಲು ಸರ್ಕಾರ ಶೀಘ್ರವೇ ಹೊಸ ಟ್ರ್ಯಾಕಿಂಗ್ ಸಿಸ್ಟಮ್ ಅನ್ನು ಹೊರ ತರಲಿದೆ.
ಟೆಲಿಮ್ಯಾಟಿಕ್ಸ್ ಇಲಾಖೆ (CDoT) ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಯು ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಮತ್ತು ಈಶಾನ್ಯ ಪ್ರದೇಶಗಳು ಸೇರಿದಂತೆ ಕೆಲವು ಟೆಲಿಕಾಂ ವಲಯಗಳಲ್ಲಿ ಸಿಇಐಆರ್ ಸಿಸ್ಟಮ್‌ನ (CEIR System) ಪ್ರಯೋಗವನ್ನು ನಡೆಸುತ್ತಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವ್ಯವಸ್ಥೆ ಈಗ ಪ್ಯಾನ್ ಇಂಡಿಯಾ ನಿಯೋಜನೆಗೆ ಸಿದ್ಧವಾಗಿದೆ ಎಂದು ದೂರಸಂಪರ್ಕ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ವರದಿಯ ಪ್ರಕಾರ ಟೆಲಿಮ್ಯಾಟ್ರಿಕ್ಸ್ ಅಭಿವೃದ್ಧಿ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜ್‌ಕುಮಾರ್ ಉಪಾಧ್ಯಾಯ ಅವರು ತಂತ್ರಜ್ಞಾನವು ಪ್ಯಾನ್ ಇಂಡಿಯಾ ನಿಯೋಜನೆಗೆ ಸಿದ್ಧವಾಗಿದೆ ಎಂದು ದೃಢಪಡಿಸಿದ್ದಾರೆ. ಆದರೆ ಖಚಿತ ದಿನಾಂಕವನ್ನು ಅಧಿಕಾರಿಗಳು ತಿಳಿಸಿಲ್ಲವಾದರೂ ಸಿಇಐಆರ್ ಸಿಸ್ಟಮ್ ಮೇ 17ರಂದು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.
ಭಾರತದಲ್ಲಿ ಮೊಬೈಲ್‌ಗಳನ್ನು ಮಾರಾಟ ಮಾಡುವುದಕ್ಕೂ ಮೊದಲು ಸಾಧನಗಳ ಅಂತಾರಾಷ್ಟ್ರೀಯ ಮೊಬೈಲ್ ಸಲಕರಣೆ ಗುರುತನ್ನು (IMEI) ಬಹಿರಂಗಪಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಐಎಂಇಐ 15 ಅಂಕಿಯ ಗುರುತಾಗಿದ್ದು, ಪ್ರತಿ ಮೊಬೈಲ್ ಫೋನ್‌ನಲ್ಲೂ ಭಿನ್ನ ಸಂಖ್ಯೆಯದ್ದಾಗಿರುತ್ತದೆ. ಟೆಲಿಕಾಂ ಆಪರೇಟರ್‌ಗಳು ಹಾಗೂ ಸಿಇಐಆರ್ ಸಿಸ್ಟಮ್ ಅನ್ನು ಸಾಧನದ ಐಎಂಇಐ ಸಂಖ್ಯೆಗೆ ಲಿಂಕ್ ಮಾಡಿದ ಬಳಿಕ ಕಳೆದು ಹೋದ ಮೊಬೈಲ್ ಅನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.