LATEST NEWS
ಕೊರೊನಾ ಮಾರ್ಗಸೂಚಿ ನಿಯಮಗಳನ್ನು ಗಾಳಿಗೆ ತೂರಿದ ಉಡುಪಿ ನಗರಸಭೆಯ ಜನಪ್ರತಿನಿಧಿಗಳು…

ಉಡುಪಿ ಜೂನ್ 23: ಕೊರೊನಾ ಪ್ರಕರಣ ವನ್ನು ಇಳಿಕೆ ಮಾಡಲು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡದ ಜನರಿಗೆ ದಂಡ ಹಾಗೂ ಕ್ರಿಮಿನಲ್ ಕೇಸ್ ಹಾಕಲು ಮುಂದಾಗುವ ಉಡುಪಿ ಜಿಲ್ಲೆಯ ಅಧಿಕಾರಿಗಳಿಗೆ ಉಡುಪಿಯ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಇಲ್ಲದೆ ಜನಪ್ರತಿನಿಧಿಗಳು ಭಾಗವಹಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕೇವಲ ಜನ ಸಾಮಾನ್ಯನಿಗೆ ಮಾತ್ರ ದೇಶದ ಕಾನೂನು ಅನ್ವಯವಾಗುವುದು, ಜನಪ್ರತಿನಿಧಿಗಳಿಗೆ ಯಾವುದೇ ಕಾನೂನು ಇಲ್ಲ ಎನ್ನುವುದಕ್ಕೆ ಈ ದೃಶ್ಯ ಸಾಕ್ಷಿಯಾಗಿದೆ.

ಉಡುಪಿ ನಗರಾಡಳಿತ ಸಂಸ್ಥೆಯ ಸಾಮಾನ್ಯ ಸಭೆಯ ದೃಶ್ಯ. ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ… ಹೀಗೆ ತಾವೇ ಹೊರಡಿಸಿದ ಆದೇಶಗಳನ್ನು ಉಡುಪಿ ನಗರಸಭೆಯಲ್ಲಿ ಇಂದು ಗಾಳಿಗೆ ತೂರಲಾಯಿತು. ಇಂದು ನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿ ಬಹುತೇಕ ನಗರಸಭಾ ಸದಸ್ಯರು ಮಾಸ್ಕ್ ಧರಿಸಲೇ ಇಲ್ಲ. ಧರಿಸಿದವರ ಮಾಸ್ಕ್ ಕೂಡ ಕತ್ತಿನ ಕೆಳಗೆ ಜೋತಾಡುತ್ತಿತ್ತು. ಕೆಲವರಂತೂ ಮಾಸ್ಕಿನ ಉಸಾಬರಿಯೇ ಬೇಡ ಎಂದು ಕಿಸೆಯಲ್ಲಿ ಇಟ್ಟು ಮಾಸ್ಕ್ ಬಿಸಿ ಮಾಡುತ್ತಿದ್ದರು.
ಉಡುಪಿ ನಗರದಲ್ಲಿ ಕರೋನ ಹಬ್ಬದಂತೆ, ನೋಡಿಕೊಳ್ಳುವುದು ನಗರಸಭೆಯ ಜವಾಬ್ದಾರಿ. ಕಾನೂನು ಅನುಷ್ಠಾನ ಮಾಡುವವರೇ ಈ ರೀತಿ ಅಚಾತುರ್ಯ ಮಾಡಿರುವುದು ಎಷ್ಟು ಸರಿ? ತಾವೇ ಬೇಜವಾಬ್ದಾರಿಯಿಂದ ವರ್ತಿಸುವ ಜನಪ್ರತಿನಿಧಿಗಳು ನಾಗರಿಕರ ಹಿತವನ್ನು ಎಷ್ಟರಮಟ್ಟಿಗೆ ಕಾಯುತ್ತಾರೋ ಗೊತ್ತಿಲ್ಲ. ಕೊರೋನಾ ಎರಡು ಅಲೆಗಳ ಸಂದರ್ಭದಲ್ಲಿ ಅನೇಕ ಮಂದಿ ನಗರಸಭಾ ಸದಸ್ಯರಿಗೆ ಸೋಂಕು ತಗುಲಿ ಗುಣಮುಖರಾಗಿದ್ದಾರೆ. ಕೆಲವರಂತೂ ಗಂಭೀರ ಸ್ಥಿತಿಯಿಂದ ಹೊರ ಬಂದಿದ್ದಾರೆ. ಇಷ್ಟಾದರೂ ಪಾಠ ಕಲಿತಿಲ್ಲ ಅನ್ನೋದೇ ವಿಶೇಷ. ಬೇಲಿಯೇ ಎದ್ದು ಹೊಲ ಮೇಯ್ದರೆ ದಂಡ ಹಾಕುವವರು ಯಾರು?