Connect with us

    DAKSHINA KANNADA

    ಮೌಲ್ಯಮಾಪನ ಸಂಭಾವನೆ, ಅತಿಥಿ ಉಪನ್ಯಾಸಕರ ವೇತನ ಪಾವತಿಗೆ ಮಂಗಳೂರು ವಿವಿಯಲ್ಲಿ ದುಡ್ಡಿಲ್ಲ, ರಾಜ್ಯ ಸರಕಾರ ಮಧ್ಯ ಪ್ರವೇಶಕ್ಕೆ ಡಾ. ಎಸ್ ಆರ್ ಹರೀಶ್ ಆಚಾರ್ಯ ಆಗ್ರಹ

    ಮಂಗಳೂರು : ಮೌಲ್ಯಮಾಪನ ಸಂಭಾವನೆ, ಅತಿಥಿ ಉಪನ್ಯಾಸಕರ ವೇತನ ಪಾವತಿಗೆ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ದುಡ್ಡಿಲ್ಲ ಆದ್ದರಿಂದ ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶ ಮಾಡಬೇಕೆಂದು ವಿವಿ ಮಾಜಿ ಸಿಂಡಿಕೇಟ್ ಸದಸ್ಯ  ಡಾ. ಎಸ್ ಆರ್ ಹರೀಶ್ ಆಚಾರ್ಯ ಆಗ್ರಹಿಸಿದ್ದಾರೆ.

    ಪರೀಕ್ಷಾ ಕಾರ್ಯವನ್ನು ನಿರ್ವಹಿಸಿರುವ ಉಪನ್ಯಾಸಕರಿಗೆ ಮೌಲ್ಯಮಾಪನ ಸಂಭಾವನೆಯನ್ನು ಹಾಗೂ ಅತಿಥಿ ಉಪನ್ಯಾಸಕರುಗಳಿಗೆ ಮಾಸಿಕ ವೇತನವನ್ನು ಪಾವತಿಸಲು ಮಂಗಳೂರು ವಿಶ್ವವಿದ್ಯಾನಿಲಯವು ಪರದಾಡುತ್ತಿದೆ. ಬಾಕಿ ಪಾವತಿಸಲು ಯಾವುದೇ ಸರಿಯಾದ ಯೋಜನೆಯನ್ನು ಹೊಂದದೇ ಬೇರೆ ಬೇರೆ ಸಬೂಬುಗಳನ್ನು ಹೇಳಿಕೊಂಡು ಕಾಲಹರಣ ಮಾಡುತ್ತಿರುವ ಮಂಗಳೂರು ವಿವಿಯು ಹಣಕಾಸು ನಿರ್ವಹಣೆಯಲ್ಲಿ ಸಂಪೂರ್ಣ ಅಸಮರ್ಥವಾಗಿದೆ. ಆದುದರಿಂದ ರಾಜ್ಯ ಸರಕಾರವು ತಕ್ಷಣವೇ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ.ಎಸ್ ಆರ್ ಹರೀಶ್ ಆಚಾರ್ಯ ಆಗ್ರಹಿಸಿದ್ದಾರೆ.

    ವಿಶ್ವವಿದ್ಯಾಲಯವು ಫೆಬ್ರವರಿ 2024 ರಂದು ಪರೀಕ್ಷಾ ಮೌಲ್ಯಮಾಪನ ಕಾರ್ಯ ನಿರ್ವಹಿಸಿದ ಉಪನ್ಯಾಸಕರ ಸಂಭಾವನೆಯನ್ನು ಪಾವತಿಸಿರುವುದಿಲ್ಲ. ಜನವರಿ 2023 ರಿಂದ ಪರೀಕ್ಷಾ ಕಾರ್ಯ ನಿರ್ವಹಿಸಿದ ಮೇಲ್ವಿಚಾರಕರ ಹಾಗೂ ಜನವರಿ 2022 ರಿಂದ ಪರೀಕ್ಷಾ ಮೌಲ್ಯಮಾಪನಾ ಕೇಂದ್ರದ ಮುಖ್ಯಸ್ಥರು ಹಾಗೂ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಿದ ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಗಳ ಸಂಭಾವನೆಯ ಪಾವತಿಯನ್ನೂ ಇದುವರೆಗೆ ಮಾಡಿರುವುದಿಲ್ಲ. ಮಂಗಳೂರು ವಿವಿ ಮತ್ತು ಅದರ ಬೇರೆ ಬೇರೆ ಘಟಕ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರುಗಳಾಗಿ ಸೇವೆ ಮಾಡುತ್ತಿರುವ ಉಪನ್ಯಾಸಕರುಗಳಿಗೆ ಕಳೆದ ಮೂರು ತಿಂಗಳುಗಳಿಂದ ವೇತನ ಪಾವತಿಯಾಗಿರುವುದಿಲ್ಲ. ಇದರಿಂದ ಕಂಗಾಲಾಗಿರುವ ಅತಿಥಿ ಉಪನ್ಯಾಸಕರು ಪರದಾಡುವಂತಾಗಿದೆ. ಈ ಬಗ್ಗೆ ವೇತನ ಪಾವತಿಗೆ ಯಾವುದೇ ರೀತಿಯ ಕಾರ್ಯಯೋಜನೆಯನ್ನು ವಿವಿಯು ಹಾಕಿಕೊಂಡಿರುವುದಿಲ್ಲ. ವೇತನ ಪಾವತಿಗೆ ಹಣವನ್ನು ಹೊಂಡಿಸಿಕೊಳ್ಳಲು ಸೂಕ್ತ ಹಣಕಾಸಿನ ಮೂಲವನ್ನೂ ಹೊಂದಿರುವುದಿಲ್ಲ. ಅಲ್ಲದೇ ಮುಂದುವರಿದು ಯಾವುದೇ ವೇತನ ಹಾಗೂ ಸಂಭಾವನೆಯ ಪಾವತಿಗೆ ಯಾವುದೇ ಸೂಕ್ತ ಕ್ರಮವಿಡಲು ಸಂಪೂರ್ಣ ಅಸಮರ್ಥವಾಗಿದೆ. ಒಟ್ಟಾರೆಯಾಗಿ ವಿವಿಯ ಹಣಕಾಸು ನಿರ್ವಹಣೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂದೇಹ ಮೂಡಿದೆ ಎಂದು ಹರೀಶ್ ಆಚಾರ್ಯ ಅವರು ಆರೋಪಿಸಿದ್ದಾರೆ.

    ಮಂಗಳೂರು ವಿಶ್ವವಿದ್ಯಾನಿಲಯದ ಆರ್ಥಿಕ ಪರಿಸ್ಥಿತಿಯು ಈ ಪ್ರಮಾಣದಲ್ಲಿ ಹದಗೆಟ್ಟಿರುವ ಸಂದರ್ಭದಲ್ಲಿ ರಾಜ್ಯ ಸರಕಾರ ತನಗೇನೂ ಸಂಬಂಧ ಇಲ್ಲವೆನ್ನುವಂತೆ ಕೈ ಕಟ್ಟಿ ಕುಳಿತುಕೊಳ್ಳುವುದು ಸಾಧುವಲ್ಲ. ಈ ಬಗ್ಗೆ ಸರಕಾರವು ತಕ್ಷಣವೇ ಮಧ್ಯ ಪ್ರವೇಶಿಸಬೇಕು. ವಿವಿಯ ಹಣಕಾಸು ಪರಿಸ್ಥಿತಿಯನ್ನು ಸುಸ್ಥಿತಿಗೆ ತರುವ ಜವಾಬ್ದಾರಿಯನ್ನು ವಹಿಸಿಕೊಂಡು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡಬೇಕು. ಹಾಗೆಯೇ ವಿವಿಯ ಇಂತಹ ಆರ್ಥಿಕ ಅಧೋಗತಿಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply