LATEST NEWS
ಡಿಜೆ, ಡ್ಯಾನ್ಸ್ ಪಾರ್ಟಿ ನಿಷೇಧ..ಹೊಸ ವರ್ಷಾಚರಣೆ ಸರಳವಾಗಿ ಆಚರಿಸಲು ಉಡುಪಿ ಜಿಲ್ಲಾಧಿಕಾರಿ ಸೂಚನೆ

ಉಡುಪಿ: ಕೊರೊನಾ ಸೊಂಕಿನ ಭೀತಿ ಹಿನ್ನಲೆ ಈ ಬಾರಿ ಹೊಸವರ್ಷ ಸಂಭ್ರಮಾಚರಣೆಯನ್ನು ಸರಳವಾಗಿ ಆಚರಿಸಲು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕ್ರಿಸ್ ಮಸ್ ಮತ್ತು ಹೊಸವರ್ಷದ ಸಂಭ್ರಮಾಚರಣೆಯನ್ನು ಸರಳವಾಗಿ ಭಕ್ತಿ ಪೂರ್ವಕವಾಗಿ ಮತ್ತು ಅರ್ಥಗರ್ಭಿತವಾಗಿ ಆಚರಿಸುವ ಅವಶ್ಯಕತೆ ಇದ್ದು, ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಸಾಮಾಜಿಕ ಅಂತರವಿಲ್ಲದೆ ಹೆಚ್ಚಿನ ಜನರು ಸೇರುವ ಸಾಮೂಹಿಕ ಕೂಟಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಹೆಚ್ಚು ಜನಸಂಖ್ಯೆಯುಳ್ಳ ವಸತಿ ಸಮುಚ್ಚಯಗಳಲ್ಲಿ ಹಾಗೂ ಜನ ಸೇರುವ ಸ್ಥಳಗಳಲ್ಲಿ ಆಯೋಜಿಸುವುದನ್ನು ನಿಷೇಧಿಸಿ, ಈ ಕೆಳಗಿನಂತೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ.
ಡಿಸೆಂಬರ್ 30ರಿಂದ ಜನವರಿ 2 ರವರೆಗೆ ಕ್ಲಬ್, ಪಬ್, ರೆಸ್ಟೋರೆಂಟ್ ಹಾಗೂ ಅದೇ ತೆರನಾದ ಪ್ರದೇಶಗಳಲ್ಲಿ ಅಂತರವಿಲ್ಲದೆ ಹೆಚ್ಚು ಜನರು ಸೇರುವ, ಡಿಜೆ-ಡಾನ್ಸ್ ಕಾರ್ಯಕ್ರಮ, ವಿಶೇಷ ಪಾರ್ಟಿ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಕ್ಲಬ್, ಪಬ್, ರೆಸ್ಟೋರೆಂಟ್‌ಗಳನ್ನು ತೆರೆಯಲು ನಿರ್ಬಂಧವಿಲ್ಲ.

ಕ್ರಿಸ್‌ಮಸ್ ಆಚರಣೆ ಸಂಬಂಧಿಸಿ ಚರ್ಚ್‌ಗಳಲ್ಲಿ ಒಮ್ಮೆಲೆ ಹೆಚ್ಚು ಜನರು ಸೇರದಂತೆ ಅಂತರ ಕಾಯ್ದುಕೊಳ್ಳಲು ಮೇಲ್ವಿಚಾರಕರು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಹಬ್ಬದ ಆಚರಣೆ ಸಂದರ್ಭ ಹಸ್ತಲಾಘವ ಮತ್ತು ಆಲಿಂಗನ ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳ, ಮುಖ್ಯ ರಸ್ತೆಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಜನರ ಸೇರುವಿಕೆಯನ್ನು ಹಾಗೂ ಸಂಭ್ರಮಾಚರಣೆ ನಿಷೇಧಿಸಲಾಗಿದೆ. ಈ ಸ್ಥಳಗಳಲ್ಲಿ ಪ್ರತಿನಿತ್ಯದ ಸಾಮಾನ್ಯ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಬಂಧವಿಲ್ಲ.
65 ವರ್ಷ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರಬೇಕು. ಸರ್ಕಾರದ ಮಾರ್ಗಸೂಚಿಯಂತೆ ಹಸಿರು ಪಟಾಕಿ ಮಾತ್ರ ಹಚ್ಚಬಹುದು. ಸರ್ಕಾರದ ವಿವಿಧ ಇಲಾಖೆ, ಪ್ರಾಧಿಕಾರಗಳ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.