DAKSHINA KANNADA
ಪ್ರವೀಣ್ ಹತ್ಯೆಯ ಹಿಂದಿರುವ ಶಕ್ತಿ ಜಾಲಾಡುತ್ತಿರುವ ಎನ್.ಐ.ಎ, ತನಿಖಾ ತಂಡಕ್ಕೆ ಜಿಲ್ಲೆಯ 9 ಪೋಲೀಸರ ಸೇರ್ಪಡೆ…

ಮಂಗಳೂರು, ಆಗಸ್ಟ್ 27: ದೇಶದೆಲ್ಲೆಡೆ ಭಾರೀ ಸಂಚಲನಕ್ಕೆ ಕಾರಣವಾಗಿದ್ದ ಬಿಜೆಪಿ ಯುವಮೋರ್ಚಾ ದಕ್ಷಿಣಕನ್ನಡ ಜಿಲ್ಲೆಯ ಬೆಳ್ಳಾರೆ ನಿವಾಸಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಇದೀಗ ರಾಷ್ಟ್ರೀಯ ತನಿಖಾ ದಳ ವಹಿಸಿಕೊಂಡಿದೆ.
ಜುಲೈ 26 ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿರುವ ತನ್ನ ಕೋಳಿ ಅಂಗಡಿಯ ಬಾಗಿಲು ಹಾಕಿ ಮನೆ ಕಡೆಗೆ ಹೊರಟಿದ್ದ ಪ್ರವೀಣ್ ನೆಟ್ಟಾರು ಮೇಲೆ ಬೈಕ್ ನಲ್ಲಿ ಬಂದ ಮೂವರ ತಂಡ ತಲವಾರಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿತ್ತು. ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಿದ ಪೋಲೀಸರ ವಿಶೇಷ ತಂಡ ಕೃತ್ಯದಲ್ಲಿ ಭಾಗಿಯಾದ 10 ಜನ ಆರೋಪಿಗಳನ್ನು ಬಂಧಿಸಿತ್ತು.

ಈ ನಡುವೆ ಕೃತ್ಯದಲ್ಲಿ ಉಗ್ರ ಸಂಘಟನೆಗಳ ಕೈವಾಡವಿದೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿತ್ತು. ಇದೀಗ ಪ್ರವೀಣ್ ಹತ್ಯೆಯ ಎಲ್ಲಾ ತನಿಖೆಯು ರಾಷ್ಟ್ರೀಯ ತನಿಖಾ ದಳದ ಹೆಗಲ ಮೇಲಿದ್ದು, ತನಿಖಾ ದಳದ ಹಲವು ತಂಡಗಳು ಹತ್ಯೆಯ ಹಿಂದಿರುವ ಪ್ರಮುಖ ಶಕ್ತಿಗಳ ಹುಡುಕಾಟದಲ್ಲಿ ತೊಡಗಿದೆ. ಮೂಲಗಳ ಪ್ರಕಾರ ಪ್ರವೀಣ್ ಹತ್ಯೆಯ ಜೊತೆಗೆ ಹಿಂದೂ ಮುಖಂಡರ ಹತ್ಯೆಗೆ ಸ್ಕಚ್ ಹಾಕಿರುವ ವಿಚಾರದ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆ.
ಈ ತನಿಖೆ ಈಗಾಗಲೇ ಆರಂಭಗೊಂಡಿದ್ದು, ಪ್ರಮುಖ ಸಂಚುಕೋರರನ್ನು ತನಿಖಾ ದಳ ಸದ್ಯದಲ್ಲೇ ಬಂಧಿಸುವ ಸಾಧ್ಯತೆಯಿದೆ. ರಾಷ್ಟ್ರೀಯ ತನಿಖಾ ದಳ ಈ ನಿಟ್ಟಿನಲ್ಲಿ ಕರ್ನಾಟಕ ಪೋಲೀಸರ ನೆರವನ್ನೂ ಪಡೆದುಕೊಂಡಿದ್ದು, ಇದೀಗ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗೆ ಸೇರಿದ ಒಂಬತ್ತು ಪೋಲೀಸ್ ಸಿಬ್ಬಂದಿಗಳನ್ನು ತಮ್ಮ ತನಿಖಾ ತಂಡಕ್ಕೆ ಸೇರಿಸಿಕೊಂಡಿದೆ.
ಉಡುಪಿ ಜಿಲ್ಲೆಯ ಕಾರ್ಕಳ ಪೋಲೀಸ್ ಠಾಣೆಯ ಎಸ್.ಐ ಎಂ.ಎಸ್. ಪ್ರಸನ್ನ, ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯ ಎಸ್.ಐ. ಉದಯರವಿ, ವಿಟ್ಲ ಪೋಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಉದಯ ರೈ, ವೇಣೂರು ಠಾಣೆಯ ಹೆಡ್ ಕಾನ್ಸ್‌ಟೇಬಲ್ ಎಂ.ಪ್ರವೀಣ್, ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗಳಾದ ಪ್ರವೀಣ್ ರೈ ಮತ್ತು ಆದಂ, ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣೆಯ ವಿವೇಕ್ ಮತ್ತು ಹೆಚ್.ಕೆ.ಕುಮಾರ್, ಸುಳ್ಯ ಪೋಲೀಸ್ ಠಾಣೆಯ ಅನಿಲ್ ರಾಷ್ಟ್ರೀಯ ತನಿಖಾ ದಳಕ್ಕೆ ಸೇರ್ಪಡೆಗೊಂಡಿರುವ ಸಿಬ್ಬಂದಿಗಳಾಗಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್ ಕುಮಾರ್ ಪೋಲೀಸರ ಆರು ವಿಶೇಷ ತಂಡಗಳನ್ನು ರಚಿಸುವ ಮೂಲಕ ಸುಮಾರು 17 ದಿನ ಕರ್ನಾಟಕ, ಕೇರಳ ಮೊದಲಾದ ಭಾಗದಲ್ಲಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿತ್ತು.
ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧಿಸಲಾಗಿದ್ದರೂ, ಈ ಹತ್ಯೆಗಳ ಹಿಂದೆ ಇರುವ ಸಂಚನ್ನು ಬಯಲಿಗೆಳೆಯಲು ರಾಷ್ಟ್ರೀಯ ತನಿಖಾ ದಳ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲೇ ಈ ರೀತಿಯ ಸಂಚುಕೋರರ ಜಾಲಗಳು ಹರಡಿರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಿರುವ ತನಿಖಾ ದಳ ಇದೇ ಕಾರಣಕ್ಕೆ ಸ್ಥಳೀಯ ಪೋಲೀಸರನ್ನೂ ಇದೀಗ ತಂಡದಲ್ಲಿ ಸೇರಿಸಿಕೊಳ್ಳುವ ಮೂಲಕ ದೊಡ್ಡ ಮಟ್ಟದ ಶಾಕ್ ಅನ್ನು ಸದ್ಯದಲ್ಲೇ ನೀಡಲಿದೆ.