Connect with us

BANTWAL

ಹೆದ್ದಾರಿಗೆ ಜಾಗ ಕೊಟ್ಟು ಬೀದಿ ಪಾಲಾದ ಕುಟುಂಬಗಳು, ಕಾಗದ ಪತ್ರಕ್ಕೇ ಸೀಮಿತವಾದ ಪರಿಹಾರದ ಭರವಸೆ….

ಬಂಟ್ವಾಳ, ಆಗಸ್ಟ್ 27: ತಮ್ಮ ಮನೆ-ಮಠ ಹೋದರೂ ತೊಂದರೆಯಿಲ್ಲ, ಜನರ ಪ್ರಯಾಣಕ್ಕೆ ಯಾವುದೇ ತೊಂದರೆಯಾಗದಿರಲಿ ಎನ್ನುವ ಸದುದ್ಧೇಶದಿಂದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಜಾಗ ನೀಡಿದ ಕುಟುಂಬಗಳು ಇದೀಗ ಬೀದಿಗೆ ಬೀಳುವ ಸ್ಥಿತಿಗೆ ತಲುಪಿದೆ.

ಹೌದು ಇದು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದ ಮಣಿಹಳ್ಳ, ಚೆಂಡ್ತಿಮಾರ್ ಮೊದಲಾದ ಗ್ರಾಮಗಳ ಬಡ ಜನರ ಸದಸ್ಯದ ಸ್ಥಿತಿಯಾಗಿದೆ. ಬಂಟ್ವಾಳ- ಕೊಟ್ಟಿಗೆಹಾರ ರಾಷ್ಟ್ರೀಯ ಹೆದ್ದಾರಿ 73 ರ ಅಗಲೀಕರಣಕ್ಕಾಗಿ ಎರಡು ವರ್ಷಗಳ ಹಿಂದೆ ಬಂಟ್ವಾಳದಿಂದ ಪೂಂಜಾಲುಕಟ್ಟೆ ವರೆಗಿನ ರಸ್ತೆ ಬದಿಯ ಖಾಸಗಿ ಜಾಗಗಳನ್ನು ಒತ್ತುವರಿ ಮಾಡಲಾಗಿತ್ತು. ಜಾಗ ಬಿಟ್ಟುಕೊಟ್ಟ ಕುಟುಂಬಗಳಿಗೆ ಉತ್ತಮ ಪರಿಹಾರವನ್ನೂ ನೀಡಲಾಗುವುದು ಎನ್ನುವ ಭರವಸೆಯನ್ನೂ ನೀಡಲಾಗಿತ್ತು.

ರಸ್ತೆ ಅಗಲೀಕರಣದಿಂದ ಜನರಿಗೆ ಉಪಕಾರವಾಗುತ್ತದೆ ಎನ್ನುವ ಕಾರಣಕ್ಕೆ ಯಾವುದೇ ತಕರಾರು ಎತ್ತದೆ ತಮ್ಮ ಮನೆ,ತೋಟ,ಕೊಟ್ಟಿಗೆ,ಅಂಗಡಿ ಹೀಗೆ ಎಲ್ಲವನ್ನೂ ಹೆದ್ದಾರಿಗೆ ಬಿಟ್ಟುಕೊಟ್ಟ ಬಡ ಕುಟುಂಬಗಳು ಇದೀಗ ಪರಿಹಾರಕ್ಕಾಗಿ ಆಸೆಗಣ್ಣುಗಳಿಂದ ಕಾಯುತ್ತಿದೆ. ಪರಿಹಾರ ಸಿಗುವುದೆಂದು ಮನೆಯನ್ನು ಕಳೆದುಕೊಂಡು ಬಾಡಿಗೆ ಮನೆಯಲ್ಲಿ ಕುಳಿತುಕೊಂಡ ಕುಟುಂಬಗಳು ಪರಿಹಾರವೂ ಇಲ್ಲ, ಇತ್ತ ಬಾಡಿಗೆ ಕೊಡಲು ಹಣವೂ ಇಲ್ಲದೆ ಸಂಕಷ್ಟದಲ್ಲಿದೆ.

ಜಿಲ್ಲಾಧಿಕಾರಿಯಿಂದ ಹಿಡಿದು ಪ್ರಧಾನಿ ಕಛೇರಿವರೆಗೆ ತಮಗಾದ ಅನ್ಯಾಯವನ್ನು ಗ್ರಾಮಸ್ಥರು ತಿಳಿಸಿದ್ದರೂ, ಈವರೆಗೆ ಪರಿಹಾರ ದೊರಕಿಲ್ಲ ಎನ್ನುವ ಅಸಮಾಧಾನ ಬಡ ಕುಟುಂಬಗಳದ್ದಾಗಿದೆ. ಪರಿಹಾರಕ್ಕಾಗಿ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ ವೇಳೆ ಲೋಕೋಪಯೋಗಿ ಇಲಾಖೆ ಮೂಲಕ ಪರಿಹಾರದ ಮೊತ್ತ ನೀಡಲಾಗಿದೆ ಎನ್ನುವ ಉತ್ತರವೂ ಬಂದಿದೆ. ಆದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು ಮತ್ತೊಂದು ಕಾರಣವನ್ನು ನೀಡುವ ಮೂಲಕ ಸತಾಯಿಸುತ್ತಿದ್ದಾರೆ ಎನ್ನುವ ಆರೋಪವಿದೆ.

ರಸ್ತೆ ಬದಿಯಲ್ಲಿದ್ದ ಖಾಲಿ ಜಾಗ ಹೊಂದಿದ ಕೆಲವು ವ್ಯಕ್ತಿಗಳಿಗೆ ತಕ್ಷಣವೇ ಪರಿಹಾರವನ್ನು ನೀಡಲಾಗಿದೆ.ಆದರೆ ಮನೆಯನ್ನು ಕಳೆದುಕೊಂಡವರಿಗೆ ಪರಿಹಾರ ನೀಡಲು ಸತಾಯಿಸಲಾಗುತ್ತಿದೆ ಎನ್ನುವ ಆರೋಪವನ್ನು ಗ್ರಾಮಸ್ಥರು ಮಾಡಲಾರಂಭಿಸಿದ್ದಾರೆ. ಜನಪ್ರತಿನಿಧಿಗಳ,ಅಧಿಕಾರಿಗಳ ಪೊಳ್ಳು ಭರವಸೆಯಿಂದ ರೋಸಿ ಹೋಗಿರುವ ಗ್ರಾಮಸ್ಥರು ಬೀದಿಗಿಳಿದು ಹೋರಾಟ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply