LATEST NEWS
ತುಳು ಸಿನೆಮಾ ಇಂಡಸ್ಟ್ರಿಗೆ ಗೋಲ್ಡನ್ ಸ್ಟಾರ್ ಎಂಟ್ರಿ – ಶಿಲ್ಪಾ ಗಣೇಶ್ ನಿರ್ಮಾಣದಲ್ಲಿ ತುಳು ಸಿನೆಮಾ
ಮಂಗಳೂರು ಜನವರಿ 16: ತುಳು ಸಿನೆಮಾಕ್ಕೆ ಇದೀಗ ಸ್ಯಾಂಡಲ್ವುಡ್ ನಿರ್ಮಾಣ ಸಂಸ್ಥೆ ಸಿನೆಮಾ ಮಾಡಲು ಮುಂದೆ ಬಂದಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಗೋಲ್ಡನ್ ಮೂವಿಸ್ ನಿರ್ಮಾಣ ಸಂಸ್ಥೆ ಮೊದಲ ತುಳು ಸಿನೆಮಾ ನಿರ್ಮಾಣ ಮಾಡುತ್ತಿದ್ದು, ಅದರ ಮುಹೂರ್ತ ಇಂದು ಕುದ್ರೋಳಿ ದೇವಸ್ಥಾನದಲ್ಲಿ ನಡೆಯಿತು.
ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ನಿರ್ಮಾಣದ ‘’ಪ್ರೊಡಕ್ಷನ್ ನಂಬರ್ 1’’ ಹೆಸರಿನ ಹೊಸ ತುಳು ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು. ಚಿತ್ರಕ್ಕೆ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಅವರ ಪುತ್ರ ನಿತ್ಯಪ್ರಕಾಶ್ ನಾಯಕ ನಟನಾಗಿ ಆಯ್ಕೆಯಾಗಿದ್ದು, ಮುಹೂರ್ತ ಸಮಾರಂಭದಲ್ಲಿ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಬಳಿಕ ಮಾತನಾಡಿದ ಗಣೇಶ್ ನನ್ನ ಹೆಂಡ್ತಿಗೆ ತುಳು ಸಿನಿಮಾ ಮಾಡಬೇಕಿತ್ತು. ತನ್ನ ಮಾತೃಭಾಷೆಯಲ್ಲಿ ಸಿನಿಮಾ ಮಾಡಬೇಕು ಅಂತ ಹೇಳುತ್ತಿದ್ದಳು. ಈಗ ಒಳ್ಳೆ ಕತೆ ಸಿಕ್ಕಿದ್ದು ಸಿನಿಮಾ ಮಾಡಲು ಹೊರಟಿದ್ದಾಳೆ. ಆಕೆಯೇ ಪ್ರೊಡ್ಯೂಸರ್. ನಾನಲ್ಲ ಎಂದರು.
ನೀವು ಮೊದಲ ಬಾರಿಗೆ ತುಳು ಸಿನಿಮಾ ಮಾಡಲು ಹೊರಟಿದ್ದೀರಾ, ನೀವು ನಟಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ಈ ಬಗ್ಗೆ ಪ್ರೊಡ್ಯೂಸರ್ ಏನೂ ಹೇಳಿಲ್ಲ. ನಮ್ಮನ್ನು ಇಷ್ಟಪಡೋರು ಹೆಚ್ಚು ಜನ ತುಳುನಾಡಿನಲ್ಲಿ ಇದ್ದಾರೆ. ನನಗೆ ಆಸೆ ಇದೆ, ಅವರಿಗೋಸ್ಕರ ಆದ್ರೂ ನಟಿಸಬೇಕು ಅಂತ. ಖಂಡಿತವಾಗಿಯೂ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದರು.