National
ನೇಪಾಳ ಸಶಸ್ತ್ರ ಪೊಲೀಸ್ ಪಡೆಯಿಂದ ಭಾರತೀಯರ ಮೇಲೆ ಗುಂಡಿನ ದಾಳಿ ಓರ್ವ ಸಾವು.
ಇಬ್ಬರು ಗಂಭೀರ ಗಾಯಗೊಂಡಿದ್ದು, ಓರ್ವ ನೇಪಾಳ ಪೊಲೀಸರು ವಶಕ್ಕೆ
ಬಿಹಾರ ಜೂನ್ 12: ಭಾರತದ ಭೂ ಭಾಗಗಳನ್ನು ತನ್ನ ನಕ್ಷೆಯಲ್ಲಿ ಸೇರಿಸಿದ ನೇಪಾಳ, ಈಗ ಭಾರತದ ಜೊತೆ ತನ್ನ ಭಿನ್ನಾಭಿಪ್ರಾಯವನ್ನು ಮುಂದುವರೆಸುತ್ತಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಭಾರತ ಹಾಗೂ ನೇಪಾಳ ಗಡಿ ಭಾಗದಲ್ಲಿ ನೇಪಾಳ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಭಾರತದ ಒಬ್ಬ ನಾಗರೀಕ ಮೃತಪಟ್ಟಿದ್ದಾರೆ.
ಈ ಘಟನೆ ಭಾರತ ಮತ್ತು ನೇಪಾಳ ಗಡಿಭಾಗದಲ್ಲಿರುವ ಲಾಲ್ಬಂದಿ ಗಡಿ ಹೊರಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಮತ್ತೊಬ್ಬನನ್ನು ನೇಪಾಳ ಸಶಸ್ತ್ರ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಹೇಳಲಾಗುತ್ತಿದೆ.
ಮೃತ ಯುವಕನನ್ನು ದಿನೇಶ್ ಕುಮಾರ್ (25 ಎಂದು ಗುರುತಿಸಲಾಗಿದೆ. ಉಮೇಶ್ ರಾಮ್ ಮತ್ತು ಉದಯ್ ಠಾಕೂರ್ ಗಾಯಗೊಂಡವರು. ಉಮೇಶ್ ರಾಮ್ನ ಬಲಗೈಗೆ ಗಾಯವಾಗಿದ್ದರೆ, ಒಂದು ಗುಂಡು ಉದಯ್ ಠಾಕೂರ್ನ ತೊಡೆಯನ್ನು ಹೊಕ್ಕಿದೆ ಎನ್ನಲಾಗಿದೆ. ಲಗನ್ ರಾಯ್ ಎಂಬಾತನನ್ನು ನೇಪಾಳ ಸಶಸ್ತ್ರ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಹೇಳಲಾಗುತ್ತಿದೆ.
ಶುಕ್ರವಾರ ಬೆಳಗ್ಗೆ 8.45ರಲ್ಲಿ ಗಡಿ ಭಾಗದ ಸೀತಾಮಾರಿ ಜಿಲ್ಲೆಯ ಜಾನಕಿನಗರ ಗ್ರಾಮದ ಈ ಯುವಕರು ನೇಪಾಳದ ಗಡಿ ಭಾಗಕ್ಕೆ ಹೋಗಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ನೇಪಾಳ ಸಶಸ್ತ್ರ ಪೊಲೀಸರು ಏಕಾಏಕಿ ಗುಂಡಿನ ದಾಳಿ ನಡೆಸಿದರು ಎನ್ನಲಾಗಿದೆ. ಸಶಸ್ತ್ರ ಸೀಮಾ ಬಲ್ನ (ಎಸ್ಎಸ್ಬಿ) ಐಜಿ ಸಂಜಯ್ಕುಮಾರ್ ಈ ವಿಷಯವನ್ನು ಖಚಿತಪಡಿಸಿದ್ದಾರೆ.
ಗಾಯಾಳುಗಳನ್ನು ಸೀತಾಮಾರಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಗೆ ಲಾಲ್ಬಂದಿ ಗಡಿ ಹೊರಠಾಣೆ ವ್ಯಾಪ್ತಿಯಲ್ಲಿ ಗಸ್ತನ್ನು ಹೆಚ್ಚಿಸಲಾಗಿದೆ. ಸದ್ಯ ಗುಂಡಿನ ದಾಳಿ ನೇಪಾಳದ ಗಡಿಯೊಳಗೆ ನಡೆದಿದೆ. ಆದ್ದರಿಂದ, ಈ ಘಟನೆಗೆ ನಿಖರವಾದ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ.