LATEST NEWS
ಕರಾವಳಿಯಲ್ಲಿ ಮಾತೆ ಮರಿಯಮ್ಮ ಹುಟ್ಟುಹಬ್ಬ ಮತ್ತು ತೆನೆ ಹಬ್ಬದ ಸಡಗರ
ಕರಾವಳಿಯಲ್ಲಿ ಮಾತೆ ಮರಿಯಮ್ಮ ಹುಟ್ಟುಹಬ್ಬ ಮತ್ತು ತೆನೆ ಹಬ್ಬದ ಸಡಗರ
ಮಂಗಳೂರು ಸೆಪ್ಟೆಂಬರ್ 8: ಕ್ರೈಸ್ತರ ಪವಿತ್ರ ಹಬ್ಬವಾದ ಕನ್ಯಾ ಮರಿಯಮ್ಮನವರ ಜನ್ಮದಿನವನ್ನು ಕರಾವಳಿಯಾದ್ಯಂತ ಕ್ರೈಸ್ತ ಭಾಂಧರು ಸಂಭ್ರಮ ಮತ್ತು ಸಡಗರಗಳಿಂದ ಆಚರಿಸಿದರು. ಪೂರ್ವದ ರೋಮ್ ನಗರ ಎಂದೇ ಜನಜನಿತವಾದ ಮಂಗಳೂರಿನ ಚರ್ಚುಗಳಲ್ಲಿ ಮಾತೆ ಮರಿಯಮ್ಮ ಜಯಂತಿ ಪ್ರಯುಕ್ತ ವಿಶೇಷ ಪಾರ್ಥನೆ , ಪೂಜಾ ವಿಧಿವಿಧಾನಗಳು ನಡೆದುವು. ಸಾವಿರಾರು ಕ್ರೈಸ್ತ ಭಾಂಧವರು ಭಕ್ತಿಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಕ್ಕಳು ಹಾಗೂ ಹಿರಿಯರು ಮನೆಯ ತೋಟದಲ್ಲಿನ ಹೂವುಗಳನ್ನು ತಂದು ಚರ್ಚಿನಲ್ಲಿ ನಡೆಯುವ ಪ್ರಾರ್ಥನಾ ವಿಧಿಗಳಲ್ಲಿ ಭಾಗವಹಿಸಿ ಕನ್ಯಾ ಮರಿಯಮ್ಮನವರಿಗೆ ತಾವು ತಂದ ಹೂಗಳನ್ನು ಸಮರ್ಪಿಸಿ ಸಂಭ್ರಮಿಸಿದರು. ಈ ಹಬ್ಬಕ್ಕೆ ಪೂರ್ವ ತಯಾರಿಯಾಗಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆ ಆಯೋಜಿಸಲಾಗುತ್ತಿದೆ.
ಕರಾವಳಿಯಲ್ಲಿ ಕ್ರೈಸ್ತರು ಕನ್ಯಾ ಮರಿಯಮ್ಮನವರ ಈ ಜನ್ಮದಿನವನ್ನು ಹೊಸ ಬೆಳೆಯ ಹಬ್ಬವನ್ನಾಗಿ ಕೂಡ ಆಚರಿಸುತ್ತಾರೆ. ತಮ್ಮ ಗದ್ದೆಗಳಲ್ಲಿ ಬೆಳೆಸಿದ ಹೊಸ ಪೈರನ್ನು ದೇವರಿಗೆ ಸಮರ್ಪಿಸಿ ಹೊಸ ಅಕ್ಕಿಯ ಊಟ ಮಾಡುವುದು ಇವರ ವಾಡಿಕೆ. ಅದಕ್ಕೆ ಪೂರ್ವಭಾವಿಯಾಗಿ ಎಲ್ಲಾ ಚರ್ಚುಗಳಲ್ಲಿ ಕನ್ಯಾಮರಿಯಮ್ಮನವರಿಗೆ ನೊವೆನಾ ಪ್ರಾರ್ಥನೆಯೊಂದಿಗೆ ತೆನೆ ಹಬ್ಬಕ್ಕೆ ವಿಶೇಷ ತಯಾರಿ ಆರಂಭಿಸಲಾಗುತ್ತದೆ.
ಇಂದು ಸಂಪೂರ್ಣ ಸಸ್ಯಹಾರದಿಂದ ಕೂಡಿದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಕುಟುಂಬವರ್ಗ ಹಾಗೂ ನೆರೆಯವರೊಂದಿಗೆ ಕೂಡಿ ಸವಿಯುತ್ತಿವುದು ಇಲ್ಲಿನ ವಿಶೇಷವಾಗಿದೆ. ಕ್ರಿ.ಶ. 475ರಲ್ಲಿ ಕಾನ್ಸ್ಸ್ಟಾಂಟಿನೋಪಲ್ನಲ್ಲಿ ಮೇರಿ ಜಯಂತಿ ಮೊದಲು ಆಚರಣೆಗೆ ಬಂತು ಎಂಬ ಪ್ರತೀತಿ ಇದೆ. ಮುಂದಿನ ಶತಮಾನಗಳಲ್ಲಿ ಈ ಹಬ್ಬದ ಬಗ್ಗೆ ಚರಿತ್ರೆ ಅನೇಕ ನಿದರ್ಶನಗಳನ್ನು ಕೊಡುತ್ತದೆ.
13ನೇ ಶತಮಾನದಲ್ಲಿ ಪೂರ್ವ ಹಾಗೂ ಪಶ್ಚಿಮ ದೇಶಗಳಲ್ಲಿ ಮೇರಿ ಮಾತೆ ಜಯಂತಿಯ ಆಚರಣೆಗೆ ಸಾಂಪ್ರದಾಯಕ ಮುನ್ನುಡಿ ಸಿಕ್ಕಿತು. ಪೋರ್ಚುಗೀಸರ ಆಗಮನದೊಂದಿಗೆ ಭಾರತದ ಕ್ರೈಸ್ತರಲ್ಲೂ ಮೇರಿ ಮಾತೆಯ ಜಯಂತಿ ಆಚರಣೆಗೆ ಬಂತು.