KARNATAKA
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಖ್ಯಾತಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ
ಬೆಂಗಳೂರು,ಆಗಸ್ಟ್ 12 : ಕಾಡು ಕುದುರೆ ಓಡಿ ಬಂದಿತ್ತ ಖ್ಯಾತಿಯ, ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ (83) ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ.
ಸುಬ್ಬಣ್ಣ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರನ್ನು ಜಯನಗರದ ಶಾಂತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಹೃದಯಾಘಾತ ಆಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲು ಆಯಂಬುಲೆನ್ಸ್ ನಲ್ಲಿ ಕರೆದೊಯ್ಯಲಾಗುತ್ತಿತ್ತು. ಆಗ ಮಾರ್ಗಮಧ್ಯೆ ಆಂಬುಲೆನ್ಸ್ ನಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಕನ್ನಡದ ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕರಲ್ಲಿ ಒಬ್ಬರಾಗಿದ್ದಾರೆ.ಸುಬ್ಬಣ್ಣ ಅವರ ನಿಜ ನಾಮಧೇಯ ಜಿ.ಸುಬ್ರಹ್ಮಣ್ಯಂ ‘.ಶ್ರೀ ಗಣೇಶ್ ರಾವ್ ಹಾಗೂ ರಂಗನಾಯಕಮ್ಮನವರ ಮುದ್ದಿನ ಮಗನಾದ ಸುಬ್ಬಣ್ಣ. ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ 1938ರಲ್ಲಿ ಜನಿಸಿದರು.
ಸುಬ್ಬಣ್ಣ ಬಿ.ಎ.,ಬಿ.ಕಾಂ.,ಎಲ್.ಎಲ್.ಬಿ.,ಪದವೀದರರು. ವಕೀಲರಾಗಿ ವ್ರತ್ತಿ ಬದುಕು ಆರಂಭಿಸಿದ ಇವರು ಬಳಿಕ ನೋಟರಿಯಾಗಿ ನೇಮಕಗೊಂಡು ಕೆಲವು ವರ್ಷಗಳ ಕಾಲ ಸಂಗೀತದ ಕಡೆ ಮುಖ ಮಾಡದಿದ್ದರೂ, ರಕ್ತಗತವಾಗಿದ್ದ ಸಂಗೀತ ಆಗಾಗ ಇವರನ್ನು ಎಚ್ಚರಿಸಿ ಶಾಲಾ ಸಮಾರಂಭಗಳಲ್ಲಿ ಹಾಡುವಂತೆ ಪ್ರೇರೇಪಿಸುತ್ತಿತ್ತು.
ಇದರಿಂದಾಗಿ ಶಾಲಾ ದಿನಗಳಲ್ಲಿ ಹಲವಾರು ಪ್ರಶಸ್ತಿ ಪಡೆದು, ಹಾಡಿನ ಸುಬ್ಬಣ್ಣ ಎಂದೆನಿಸಿಕೊಂಡರು.ಮುಂದೆ ಕನ್ನಡ ಗಾಯನ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡ ಸುಬ್ಬಣ್ಣ 1963ರಲ್ಲಿ ಆಕಾಶವಾಣಿಯ ಗಾಯಕರಾಗಿಯೂ ಆಯ್ಕೆಯಾದರು. ಸಿನಿಮಾ ರಂಗಕ್ಕೆ ಸುಬ್ಬಣ್ಣ ಹಿನ್ನೆಲೆ ಗಾಯಕರಾಗಿ ಚಿತ್ರರಂಗ ಪ್ರವೇಶಿಸಿದ್ದು ನಾಟಕಕಾರ, ಚಿತ್ರ ನಿರ್ದೇಶಕ ಕವಿ ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಮೂಲಕ.
1979ರಲ್ಲಿ ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರಿಂದ ರಜತಕಮಲ ಪ್ರಶಸ್ತಿ ಸ್ವೀಕರಿಸಿದ ಸುಬ್ಬಣ್ಣ ಯಶಸ್ಸಿನ ಕುದುರೆಯೇರಿ ನಡೆದರು. ಆಕಾಶವಾಣಿ ಎಂ.ಎಸ್.ಐ.ಎಲ್. ಪ್ರಾಯೋಜಕತ್ವದಲ್ಲಿ ಪ್ರಸಾರ ಮಾಡಿದ ಜನಪ್ರಿಯ ಕಾರ‍್ಯಕ್ರಮದಲ್ಲಿ ‘ಕೋಡಗನ ಕೋಳಿ ನುಂಗಿತ್ತಾ..’, ‘ಅಳಬೇಡಾ ತಂಗಿ ಅಳಬೇಡ…’ ‘ಬಿದ್ದೀಯಬ್ಬೇ ಮುದುಕಿ..’ ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿದ ಸುಬ್ಬಣ್ಣ ಮನೆ ಮಾತಾದರು.
ಸುಬ್ಬಣ್ಣ ಅವರ ಸಾಧನೆಯನ್ನು ಮನ್ನಿಸಿ ರಾಜ್ಯ ಸರ್ಕಾರ ಪ್ರತಿಷ್ಠಿತ ಸಂತ ಶಿಶುನಾಳ ಶರೀಫ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಅಕಾಡಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ನೀಡಿ ಗೌರವಿಸಿದರೆ, ಅಭಿಮಾನಿಗಳು ನೂರಾರು ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದ್ದಾರೆ.1974ರಲ್ಲಿ ಪ್ರಥಮ ಬಾರಿಗೆ ಕರ್ನಾಟಕಕ್ಕೆ ಸಂದ ‘ರಜತಕಮಲ್’ಪುರಸ್ಕಾರವನ್ನು ಪಡೆದ ಹೆಗ್ಗಳಿಕೆ ಇವರದು.
You must be logged in to post a comment Login