UDUPI
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ- ಮಾಹಿತಿ ಕಾರ್ಯಾಗಾರ
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ- ಮಾಹಿತಿ ಕಾರ್ಯಾಗಾರ
ಉಡುಪಿ, ಫೆಬ್ರವರಿ 7 : ಹೆಚ್‍ಐವಿ ಸೋಕಿಂತರ ಗೌಪ್ಯತೆ ಕಾಪಾಡುವುದು ಎಲ್ಲರ ಹೊಣೆಯಾಗಿದ್ದು, ಸೋಂಕು ಬರದಂತೆ ಸಮಾಜದಲ್ಲಿರುವ ಇತರ ಇಲಾಖೆಗಳು ಆರೋಗ್ಯ ಇಲಾಖೆಗಳೊಂದಿಗೆ ಸೇರಿ ಅರಿವು ಮೂಡಿಸುವ ಹೊಣೆ ಹೊರಬೇಕಾಗಿದೆ ಎಂದು ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಟಿ ಹೇಳಿದರು.
ಅವರಿಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ(ರಿ), ನ್ಯಾಯಾಂಗ ಇಲಾಖೆ, ಉಡುಪಿ , ಜಿಲ್ಲಾ ಏಡ್ಸ್ ನಿಯಂತ್ರಣ ತಡೆಗಟ್ಟುವ ಘಟಕ, ಉಡುಪಿ ಹಾಗೂ ರಕ್ತ ನೀಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ, ಉಡುಪಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಬಾರ್ ಅಸೋಸಿಯೇಶನ್‍ನಲ್ಲಿ ನಡೆದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಮಾಹಿತಿ ಕಾರ್ಯಾಗಾರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹೆಚ್‍ಐವಿ ಸೋಂಕಿತರನ್ನು ತಾರತಮ್ಯ ಮಾಡದಂತೆ ತಡೆಗಟ್ಟಲು, ಅವರಿಗಿರುವ ಹಕ್ಕು ಮತ್ತು ಮಾಹಿತಿ ನೀಡಿ ಜೀವನಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾನೂನುಗಳನ್ನು 2017ರಲ್ಲಿ ಜಾರಿಗೆ ತರಲಾಗಿದೆ. ಕಲಂ-34ರಲ್ಲಿ ಹೆಚ್‍ಐವಿ ಪೀಡಿತರ ಪಾಲನೆ-ಪೋಷಣೆ, ರಕ್ಷಣೆ, ನಿಯಂತ್ರಣ ಕುರಿತು ನ್ಯಾಯಾಲಯ ಒದಗಿಸಬೇಕಾದ ಮಾಹಿತಿಯನ್ನು ಒಳಗೊಂಡಿದೆ. ಸೋಂಕಿತರು ನ್ಯಾಯಾಂಗಕ್ಕೆ ಬಂದಾಗ ಗೌಪ್ಯತೆ ಕಾಪಾಡುವ ಜವಾಬ್ದಾರಿಯೂ ನ್ಯಾಯಾಂಗಕ್ಕಿದೆ ಎಂದು ಅವರು ಹೇಳಿದರು.
ರಕ್ತ ನೀಡಿ ಜೀವ ಉಳಿಸುವ ಮಾನವೀಯ ಕರ್ತವ್ಯ ನಮ್ಮದಾಗಬೇಕು. ರಕ್ತದಾನಕ್ಕಿಂತ ಮತ್ತೊಂದು ದೊಡ್ಡ ದಾನವಿಲ್ಲ. ಸ್ವಯಂ ಪ್ರೇರಿತರಾಗಿ ಒಬ್ಬ ರೋಗಿಗೆ ರಕ್ತ ನೀಡಿ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಅಲ್ಲದೆ ಸಮಾಜದ ಪಿಡುಗಾಗಿ ಕಾಡುತ್ತಿರುವ ಕಾಯಿಲೆಗಳ ಬಗ್ಗೆ ಜಾಗೃತಿ ಹಾಗೂ ಅರಿವು ಕೂಡ ಮುಖ್ಯ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಅವರು ಹೇಳಿದರು.
ಇಡೀ ವಿಶ್ವದಲ್ಲಿ 21 ಲಕ್ಷ ಜನ ಹೆಚ್‍ಐವಿ ಸೋಂಕಿನಿಂದ ಸಾಮಾಜಿಕ ಮತ್ತು ಆರ್ಥಿಕವಾಗಿ ಬಳಲುತ್ತಿದ್ದು, 15-49 ವಯೋಮಾನದವರೇ ಹೆಚ್ಚಾಗಿರುವುದು ದುರಂತ. ಆದರೆ ಕರ್ನಾಟಕದಲ್ಲಿ 2015-16ರ ವರದಿಯಂತೆ 66 ಶೇಕಡ ಕಡಿಮೆಯಾಗಿದ್ದು, ಮಹಿಳೆಯರಿಗಾಗಿ ವಿಶೇಷ ವಸತಿ ಯೋಜನೆ, ಮೀಸಲಾತಿ, ಸಾಲ ನೀಡುವುದು, ಸ್ವ-ಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ 50 ಶೇಕಡ ದಷ್ಟು ಖಾಸಗಿ ಬಸ್‍ಗಳಲ್ಲಿ ಓಡಾಡಲು ರಿಯಾಯಿತಿ ನೀಡಲಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಎಸ್.ವಿ ಹೇಳಿದರು.
ಚಿಕಿತ್ಸೆಯಿಂದ ಹೆಚ್‍ಐವಿ ಸೋಂಕಿತರ ಜೀವಿತಾವಧಿಯನ್ನು ಹೆಚ್ಚಿಸಬಹುದಾಗಿದೆ. ತಾಯಿಯಿಂದ ಮಗುವಿಗೆ ಸೋಂಕು ಹರಡದಂತೆ ತಾಯಿಯ ರಕ್ತವನ್ನು ಪರೀಕ್ಷಿಸಿ, ಸೂಕ್ತ ಚಿಕಿತ್ಸೆ ನೀಡಿ, ಬಳಿಕ 6 ವಾರಗಳ ಕಾಲ ಮಗುವಿಗೆ ಚಿಕಿತ್ಸೆ ನೀಡುವುದರಿಂದ ತಾಯಿಯಿಂದ ಸೋಂಕು ಹರಡುವುದನ್ನು ತಡೆಯಬಹುದಾಗಿದೆ. ಅದರಂತೆ 247 ಮಕ್ಕಳು ಈಗಾಗಲೇ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.