LATEST NEWS
ನಾರಾಯಣ ಗುರುಗಳು ಶಾಂತಿ ಸಂದೇಶ ನೀಡಿದ ದಾರ್ಶನಿಕರು
ನಾರಾಯಣ ಗುರುಗಳು ಶಾಂತಿ ಸಂದೇಶ ನೀಡಿದ ದಾರ್ಶನಿಕರು
ಉಡುಪಿ, ಆಗಸ್ಟ್ 27: ಸಮಾಜದ ಎಲ್ಲಾ ವರ್ಗಗಳನ್ನು ಒಟ್ಟುಗೂಡಿಸಿ ಶಾಂತಿ ಸಂದೇಶ ನೀಡಿದ ಜಗತ್ತಿನ ಪ್ರಥಮ ದಾರ್ಶನಿಕರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ವಿಧಾನ ಪರಿಷತ್ ನ ವಿರೋಧ ಪಕ್ಷದ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಸೋಮವಾರ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಜಿಲ್ಲಾ ಬಿಲ್ಲವ ಸಮುದಾಯ ಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾರಾಯಣಗುರುಗಳು ಒಂದೇ ಜಾತಿ, ಒಂದೆ ಮತ, ಒಂದೇ ದೇವರು ಎಂಬ ಸಂದೇಶ ನೀಡಿದ್ದು, ಇವರ ಆಶ್ರಮಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀ ಅವರು ಅಲ್ಲಿನ ಪರಿಸರ ಕಂಡು ಪ್ರಭಾವಿತರಾಗಿದ್ದರು, ನಾರಾಯಣಗುರುಗಳು ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದ ಕೋಟಾ ಶ್ರೀನಿವಾಸ ಪೂಜಾರಿ, ಶಿಕ್ಷಣದಿಂದ ಉನ್ನತಿ ಪಡೆಯಬೇಕು ಹಾಗೂ ಸಂಘಟನೆಯಿಂದ ಶಕ್ತಿ ಪಡೆಯಬೇಕು ಎನ್ನುವ ಅವರ ಸಂದೇಶ ಎಲ್ಲಾ ಕಾಲಕ್ಕೂ ಪ್ರಸ್ತುತ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಮೌಡ್ಯ ತುಂಬಿದ್ದ ಸಮಾಜದಲ್ಲಿ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಳುವಳಿಯ ಮೂಲಕ ಅನಿಷ್ಠ ಪದ್ದತಿಗಳನ್ನು ಕೊನೆಗಾಣಿಸಿದ ನಾರಾಯಣಗುರುಗಳ ತತ್ವ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶಿಯಾಗಬೇಕು ಎಂದು ಹೇಳಿದರು.