LATEST NEWS
ವಿಧಾನಸಭಾ ಚುನಾವಣೆಗೂ ಲೋಕಸಭಾ ಚುನಾವಣೆಗೂ ವ್ಯತ್ಯಾಸ ಇದೆ – ನಳಿನ್ ಕುಮಾರ್ ಕಟೀಲ್
ಮಂಗಳೂರು ಫೆಬ್ರವರಿ 29: ಬಿಜೆಪಿಗೆ ಬಂಡಾಯವಾಗಿ ಪುತ್ತಿಲ ಪರಿವಾರ ಅರಣ್ ಕುಮಾರ್ ಪುತ್ತಿಲ ಅವರನ್ನು ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ಕುರಿತಂತೆ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು, ಪುತ್ತಿಲ ಪರಿವಾರ ಸ್ವತಂತ್ರ ಸಂಸ್ಥೆಯಾಗಿದ್ದು, ಅದಕ್ಕೆ ತೀರ್ಮಾನ ಕೈಗೊಳ್ಳುವ ಸ್ವಾತಂತ್ರ್ಯ ಇದೆ ಎಂದು ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಪುತ್ತಿಲ ಪರಿವಾರದ ಮನವೋಲಿಕೆಗೆ ಪಕ್ಷ ಪ್ರಯತ್ನ ಮಾಡಿದೆ. ಭಾಜಪಾ ಬಹಳ ವರ್ಷಗಳ ಹೋರಾಟದಿಂದ ಅತೀ ದೊಡ್ಡ ಪಾರ್ಟಿಯಾಗಿ ಬೆಳೆದಿದೆ, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನ್ನು ಎದುರಿಸಿ ಲೋಕಸಭೆಯಲ್ಲಿ ಅತೀ ಹೆಚ್ಚು ಸೀಟು ಗೆದ್ದಿದೆ. ಹೀಗಾಗಿ ಪಕ್ಷಕ್ಕೆ ಎದುರಾಳಿಯ ಪ್ರಶ್ನೆ ಇಲ್ಲ ಎಂದರು. ಇದು ಪ್ರಜಾಪ್ರಭುತ್ವ,ಚುನಾವಣಾ ನಿಲ್ಲುವ ಹಕ್ಕು ಎಲ್ಲರಿಗೂ ಇದೆ, ಪ್ರತೀ ಚುನಾವಣೆಗೆ ಬಂದಾಗ , ಹತ್ತಾರು ಸಮಸ್ಯೆಗಳು ಉದ್ಭವವಾಗುತ್ತದೆ. ಆ ಎಲ್ಲಾ ಸವಾಲುಗಳನ್ನು ಬಿಜೆಪಿ ಗೆದ್ದು ಗೆಲುವು ಸಾಧಿಸಿದೆ. ಸದ್ಯ ರಾಮಮಂದಿರ ನಿರ್ಮಾಣದ ವಾದ ಬಳಿಕ ದೇಶದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಹಿಂದುತ್ವ,ರಾಷ್ಟ್ರವಾದ,ಅಭಿವೃದ್ಧಿ ವಿಚಾರವಾಗಿ ಜನ ಒಗ್ಗಟಾಗುತ್ತಾರೆ ಎಂದರು.
ಪುತ್ತೂರು ವಿಧಾನಸಭೆಯ ಸೋಲಿನ ಕುರಿತ ಪ್ರಶ್ನೆಗೆ ಉತ್ತರಿಸಿದ ನಳಿನ್ ವಿಧಾನಸಭಾ ಚುನಾವಣೆಗೂ ಲೋಕಸಭಾ ಚುನಾವಣೆಗೂ ವ್ಯತ್ಯಾಸ ಇದೆ, ಆಗಿನ ಸಮಸ್ಯೆ ಬೇರೆ ಈಗಿನ ವಿಚಾರ ಬೇರೆ ಎಂದರು. ಈ ಬಾರಿ ಸೀಟು ಕೊಡೋದು ಬಿಡೋದು ರಾಷ್ಟ್ರೀಯ ನಾಯಕರು ತೀರ್ಮಾನ. ಆ ತೀರ್ಮಾನಕ್ಕೆ ಕಾರ್ಯಕರ್ತನಾಗಿ ಬದ್ಧನಾಗಿದ್ದೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.