KARNATAKA
ರಾಜ್ಯ ರಾಜಕೀಯದಲ್ಲಿ ಸಂಚಲನ, ನಳಿನ್ ಕುಮಾರ್ ಕಟೀಲ್ ಸ್ಫೋಟಕ ಆಡಿಯೋ ವೈರಲ್!
ಮಂಗಳೂರು, ಜುಲೈ 19: ರಾಜ್ಯ ರಾಜಕೀಯದ ಹಿರಿಯ ಬಿಜೆಪಿ ನಾಯಕರುಗಳಾದ ಜಗದೀಶ್ ಶೆಟ್ಟರ್, ಈಶ್ವರಪ್ಪ ಟೀಂ ಸಂಪುಟದಿಂದ ಖಾಯಂ ಆಗಿ ಹೊರಬೀಳಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದೆನ್ನಲಾದ ಆಡಿಯೋವೊಂದು ವೈರಲ್ ಆಗಿದೆ.
ಈ ಮೂಲಕ ರಾಜ್ಯ ರಾಜಕಾರಣಕ್ಕೆ ರೋಚಕ ಟ್ವಿಸ್ಟ್ ದೊರೆತಿದೆ. ನಳಿನ್ ಕುಮಾರ್ ಅವರು ತಮ್ಮ ಆಪ್ತರೊಬ್ಬರ ಬಳಿ ನಡೆಸಿದ್ದಾರೆ ಎನ್ನಲಾದ ಆಡಿಯೋ ಸಂದೇಶ ವೈರಲ್ ಆಗಿದೆ. ಈ ಮಾತುಕತೆಯಲ್ಲಿ, ಯಡಿಯೂರಪ್ಪ ಅವರ ಪದಚ್ಯುತಿಯ ಸುಳಿವು ಕೂಡಾ ದೊರೆತಿದೆ.
ತುಳುವಿನಲ್ಲಿ ನಡೆಸಿರುವ ಈ ಸಂಭಾಷಣೆಯಲ್ಲಿ, “ಯಾರಿಗೂ ಹೇಳೋದು ಬೇಡ ಈಶ್ವರಪ್ಪ, ಜಗದೀಶ್ ಶೆಟ್ಟರ್ ಆ ತಂಡವನ್ನೇ ತೆಗೆದು ಹಾಕಲಾಗುತ್ತದೆ. ಹೊಸ ತಂಡ ರಚಿಸಲಾಗುತ್ತದೆ. ಏನೂ ಹೆದರಬೇಡಿ, ನಾವಿದ್ದೇವೆ. ಏನಾದರೂ, ಎಲ್ಲಾ ಇನ್ನೂ ನಮ್ಮ ಕೈಯಲ್ಲಿದೆ. ಮೂರು ಹೆಸರಿದೆ, ಯಾವುದೂ ಆಗಲೂ ಸಾಧ್ಯವಿದೆ.
ಇಲ್ಲ ಇಲ್ಲಿಯವರನ್ನು(ಕರಾವಳಿ) ಯಾರನ್ನೂ ಮಾಡೋಲ್ಲ. ಡೆಲ್ಲಿಯಿಂದಲೇ ಹಾಕುತ್ತಾರೆ.” ಎಂದು ನಳಿನ್ ಕುಮಾರ್ ಕಟೀಲ್ ಅವರೇ ಮಾತನಾಡಿದ್ದೆನ್ನಲಾದ ತುಳು ಆಡಿಯೋ ವೈರಲ್ ಆಗಿದೆ. ಈ ಮೂಲಕ ಸಂಭಾಷಣೆಯಲ್ಲಿ, ಸಿಎಂ ಬದಲಾವಣೆ ಕುರಿತು ಸೂಚ್ಯವಾಗಿ ಹೇಳಿದಂತಿದೆ. ಇದರಿಂದ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳು ಘಟಿಸಲಿವೆಯೇ ಎಂಬ ಕುತೂಹಲ ಸೃಷ್ಟಿಯಾಗಿದೆ.
ವೈರಲ್ ಆಗಿರುವ ಆಡಿಯೋ ತಮ್ಮದಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದು, ಆಡಿಯೋ ಕುರಿತು ಸಮಗ್ರ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಆಡಿಯೋ ವೈರಲ್ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ನಳಿನ್ ಕುಮಾರ್ ಕಟೀಲ್, ವೈರಲ್ ಆಗುತ್ತಿರುವ ಆಡಿಯೋದಲ್ಲಿ ಇರುವ ದನಿ ನನ್ನದಲ್ಲ, ಆ ಆಡಿಯೋವನ್ನು ಯಾರೋ ಬೇಕು ಎಂದೇ ಮಾಡಿದ್ದಾರೆ. ಈ ಆಡಿಯೋ ಬಗ್ಗೆ ಪೂರ್ತಿ ತನಿಖೆಯಾಗಲಿ. ಈಗಲೇ ನಾನು ಸಿಎಂ ಯಡಿಯೂರಪ್ಪ ಅವರಿಗೆ ತನಿಖೆ ಕುರಿತು ಪತ್ರ ಬರೆಯುತ್ತೇನೆ ಎಂದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಪಕ್ಷದಲ್ಲಿ ಈವರೆಗೂ ಚರ್ಚೆಯಾಗಿಲ್ಲ. ಚರ್ಚೆ ಆಗದ ವಿಷಯದ ಕುರಿತು ಹೇಗೆ ಮಾತನಾಡಲು ಸಾಧ್ಯ? ಯಾರೋ ದುರುದ್ದೇಶದಿಂದ ಇದನ್ನೆಲ್ಲಾ ಮಾಡಿ ವೈರಲ್ ಮಾಡುತ್ತಿದ್ದಾರೆ ಎಂದು ಕಟೀಲ್ ಕಿಡಿಕಾರಿದ್ದಾರೆ.