Connect with us

LATEST NEWS

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಮಂತ್ರಿಸಿದ ಪೆನ್ ನೀಡಿದ ವಿನಯ್ ಗುರೂಜಿ…ಭದ್ರವಾಗಲಿದೆಯಾ ರಾಜ್ಯಾಧ್ಯಕ್ಷ ಪಟ್ಟ…!!

ಉಡುಪಿ ಮಾರ್ಚ್ 13: ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಕಳಪೆ ಪ್ರದರ್ಶನಕ್ಕೆ ಸಿಟ್ಟಾಗಿರುವ ಕೇಂದ್ರ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಹಲವಾರು ಬದಲಾವಣೆಗೆ ಮುಂದಾಗಿದೆ ಎಂಬ ಸುದ್ದಿ ಹರಡಿದೆ. ಅದರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷರ ಬದಲಾವಣೆಯಾಗುತ್ತೆ ಅನ್ನುವ ಊಹಾಪೋಹ ಬಲವಾಗಿ ಹಬ್ಬಿದ್ದು, ಸಂಸದ , ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಚಿಂತೆಗೀಡಾಗುವಂತೆ ಮಾಡಿದೆ. ಆದರೆ ಈ ನಡುವೆ ಅವಧೂತ ವಿನಯ್ ಗುರೂಜಿ ಅವರು ನೀಡಿದ ಮಂತ್ರಿಸಿದ ಪೆನ್ ನಳಿನ್ ಅವರನ್ನು ಮತ್ತೆ ಲವಲವಿಕೆಯತ್ತ ಬರುವಂತೆ ಮಾಡಿದೆ.

ಹೌದು ಇಂದು ಉಡುಪಿಯಲ್ಲಿ ನಡೆದ ‘ಹೊಳಪು’ ಕ್ರೀಡಾಕೂಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗವಹಿಸಿದ್ದರು. ಆದ್ರೆ ಬಿಜೆಪಿ ರಾಜ್ಯಾಧ್ಯಕ್ಷರು ಈ ಸಭೆಯಲ್ಲಿ ಎಂದಿನ ಲವಲವಿಕೆಯಿಂದ ಇರಲಿಲ್ಲ. ಸಭೆ ಮುಗಿಸಿ ತಕ್ಷಣವೇ ಹೊರಟ ಕಟೀಲ್ ಜೊತೆ ಮಾಧ್ಯಮದವರು ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಪ್ರಶ್ನೆ ಮಾಡಿದಾಗಲೂ ಯಾವುದೇ ಉತ್ತರ ನೀಡದೆ ವಾಪಾಸಾಗಿದ್ದರು.

ಇದೇ ಸಮಾರಂಭದಲ್ಲಿ ಇಂಟರೆಸ್ಟಿಂಗ್ ವಿದ್ಯಮಾನವೊಂದು ನಡೆದಿದೆ. ಹೊಳಪು ಕ್ರೀಡಾಕೂಟದ ಸಭಾಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ ಪಕ್ಕದಲ್ಲೇ ಅವಧೂತ ವಿನಯ್ ಗುರೂಜಿ ಕುಳಿತಿದ್ದರು. ಇಬ್ಬರ ನಡುವೆ ಹೆಚ್ಚೇನು ಮಾತುಕತೆ ನಡೆದಿರಲಿಲ್ಲ. ಈ ನಡುವೆ ನಳಿನ್ ಕುಮಾರ್ ಕಟೀಲು ಕಿಸೆಯಿಂದ ತಮ್ಮ ಪೆನ್ನನ್ನು ತೆಗೆದು ಅದೇನೋ ಬರೆದುಕೊಳ್ಳುತ್ತಾರೆ. ತಕ್ಷಣ ಇದನ್ನು ಗಮನಿಸಿದ ವಿನಯ್ ಗುರೂಜಿ ಅವರ ಕೈಯಿಂದ ಪೆನ್ನನ್ನು ಪಡೆಯುತ್ತಾರೆ.

ನಳಿನ್ ಕುಮಾರ್ ಕಟೀಲ್ ಅವರ ಪೆನ್ನನ್ನು ತನ್ನ ಅಂಗೈಯಲ್ಲಿರಿಸಿಕೊಂಡು ಹತ್ತು ಸೆಕೆಂಡುಗಳ ಕಾಲ ಪ್ರಾರ್ಥನೆ ಮಾಡಿದರು. ಬಳಿಕ ತಾನು ಪ್ರಾರ್ಥಿಸಿದ ಪೆನ್ನನ್ನು ನಳಿನ್ ಕುಮಾರ್ ಕಟೀಲ್ ಗೆ ವಾಪಸ್ಸು ನೀಡುತ್ತಾರೆ. ವಿನಯ ಗುರೂಜಿ ಅವರ ವರ್ತನೆಯಿಂದ ಪುಳಕಿತಗೊಂಡ ನಳಿನ್ ಅವರಿಂದ ನಮಸ್ಕರಿಸಿ ಪೆನ್ನನ್ನು ಪಡೆಯುತ್ತಾರೆ. ಸದ್ಯ ಈ ದೃಶ್ಯಾವಳಿ ಕೆಮೆರಾ ಕಣ್ಣಿಗೆ ಸಿಕ್ಕಿದೆ. ನಳಿನ್ ಕುಮಾರ್ ಕಟೀಲ್ ಅವರ ಹುದ್ದೆ ಅಪಾಯದಲ್ಲಿ ಇರೋದು ನಿಜವೇ ಹೌದಾದರೆ… ವಿನಯ್ ಗುರೂಜಿ ಪ್ರಾರ್ಥಿಸಿ ಕೊಟ್ಟ ಪೆನ್ನು ನಳಿನ್ ಸ್ಥಾನವನ್ನು ಭದ್ರಪಡಿಸುತ್ತಾ ಕಾದುನೋಡಬೇಕು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *