DAKSHINA KANNADA
ಕುಡಿತದ ಅಮಲಿಗೆ ತಂದೆಯನ್ನೇ ಕಡಿದು ಕೊಂದ ಮಗ, ದಕ್ಷಿಣಕನ್ನಡ ಮತ್ತೊಂದು ಪೈಶಾಚಿಕ ಕೃತ್ಯ….

ಪುತ್ತೂರು : ಕುಡಿತದ ಅಮಲಿಗೆ ಮಗನೊಬ್ಬ ತಂದೆಯನ್ನೇ ಕಡಿದು ಕೊಂದ ಪೈಶಾಚಿಕ ಕೃತ್ಯ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಕುಡಿತದ ಅಮಲು ತಲೆಗೇರಿ ತಂದೆ ಹಾಗೂ ಮಗ ಹೊಡೆದಾಡಿದ್ದು, ಈ ಸಂದರ್ಭ ಮಗ ತನ್ನ ಕೈಗೆ ಸಿಕ್ಕಿದ ಕತ್ತಿಯಿಂದ ತೀವೃವಾಗಿ ತಂದೆಯ ಮೇಲೆ ಕಡಿದಿದ್ದು, ತಂದೆ ಆಸ್ಪತ್ರೆಗೆ ಸಾಗಿಸುವ ವೇಳೆಯೇ ಮೃತಪಟ್ಟಿದ್ದಾರೆ.
ಪುತ್ತೂರು ತಾಲೂಕಿನ ತಿಂಗಳಾಡಿ ಗ್ರಾಮದ ಬಾಲಯ ಎಂಬಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ತಂದೆಯನ್ನು ಹತ್ಯೆಗೈದ ಆರೋಪಿಯನ್ನು ಶಶಿಧರ್ ನಾಯ್ಕ್ ಎಂದು ಗುರುತಿಸಲಾಗಿದೆ. ಅತ್ಯಂತ ಸ್ಥಿತಿವಂತ ಕುಟುಂಬವಾಗಿರುವ ಶಶಿಧರ್ ನಾಯ್ಕ್ ಹಾಗೂ ಆತನ ತಂದೆ ಗಂಗಾಧರ್ ನಾಯ್ಕ್ ತಿಂಗಳಾಡಿಯ ಬಾಲಯದಲ್ಲಿ ಕಳೆದ ಹಲವು ವರ್ಷಗಳಿಂದ ಕೃಷಿ ಮಾಡುಕೊಂಡು ಜೀವನ ಸಾಗಿಸುತ್ತಿದ್ದರು.

ಈ ಕುಟುಂಬಕ್ಕೆ ಪುತ್ತೂರು ನಗರದ ಕೃಷ್ಣನಗರ ಎಂಬಲ್ಲಿಯೂ ಒಂದು ಮನೆಯಿದೆ. ಸ್ಥಿತಿವಂತ ಕುಟುಂಬದ ಮಗನಾದ ಶಶಿಧರ್ ನಾಯ್ಕ್ ಗೆ ಕುಡಿತದ ಜೊತೆಗೆ ಗಾಂಜಾದ ಹಚ್ಚಿಕೊಂಡಿತ್ತು ಎನ್ನಲಾಗಿದೆ. ನಿನ್ನೆ ಎಂದಿನಂತೆ ಕುಡಿದು ಮನೆಗೆ ಬಂದಿದ್ದ ಶಶಿಧರ್ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ತಂದೆಯ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ. ಈ ಸಂದರ್ಭದಲ್ಲಿ ತಂದೆ ಹಾಗೂ ಮಗನ ನಡುವೆ ತಳ್ಳಾಟ-ನೂಕಾಟವೂ ನಡೆದಿದೆ.
ತಂದೆಯ ಮೇಲೆ ರೊಚ್ಚಿಗೆದ್ದ ಶಶಿಧರ್ ನಾಯ್ಕ್ ಮನೆಯಲ್ಲೇ ಇದ್ದ ಕತ್ತಿಯಿಂದ ತಂದೆ ಗಂಗಾಧರ್ ನಾಯ್ಕ್ ಮೇಲೆ ಗಂಭೀರ ಹಲ್ಲೆ ನಡೆಸಿದ ಹಿನ್ನಲೆಯಲ್ಲಿ ಗಂಗಾಧರ್ ನಾಯ್ಕ್ ಆಸ್ಪತ್ರೆಗೆ ಸಾಗಿಸುವ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಸಂಪ್ಯ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕುಡಿತದ ಚಟದಿಂದ ಹೆತ್ತವರನ್ನೇ ಮಕ್ಕಳು ಕೊಲ್ಲುವ ಪ್ರಕರಣಗಳು ಇದೀಗ ಹೆಚ್ಚಾಗುತ್ತಿದ್ದು, ಆತಂಕದ ಬೆಳವಣಿಗೆಯೂ ಆಗಿದೆ.