LATEST NEWS
ಸಂಕಷ್ಟದಲ್ಲಿದ್ದ ಮುಸ್ಲಿಂ ಕುಟುಂಬವನ್ನು ಊರಿಗೆ ತಲುಪಿಸಿ ಮಾನವೀಯತೆ ಮೆರೆದ ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು ಜುಲೈ 19: ಕೊರೊನಾ ಮುಂಜಾಗೃತಾ ಕ್ರಮವಾಗಿ ಮಂಗಳೂರಿನಲ್ಲಿ ನಿನ್ನೆ ರಾತ್ರಿಯಿಂದ ಸಂಪೂರ್ಣ ಲಾಕ್‌ಡೌನ್ ಇದ್ದು. ಈ ಮಧ್ಯೆ ಸರ್ವಿಸ್ ಬಸ್‌ಸ್ಟಾಂಡ್ ನಲ್ಲಿ ಇಬ್ಬರು ಮಕ್ಕಳೊಂದಿಗೆ ದಿಕ್ಕು ಕಾಣದೆ ಕುಳಿತಿದ್ದ ಹಾಸನ ಮೂಲದ ಮುಸ್ಲಿಂ ಕುಟುಂಬನ್ನು ಊರಿಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್.
ಮೂಡಬಿದ್ರೆಯಲ್ಲಿ ವಾಸವಿದ್ದ ಮುಸ್ಲಿಂ ಕುಟುಂಬ ಕೊರೋನಾ ಲಾಕ್‌ಡೌನ್‌ಹಿನ್ನೆಲೆ ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿತ್ತು. ಬಾಡಿಗೆ ಕಟ್ಟಲು ಸಾಧ್ಯವಾಗದೆ ನೊಂದ ಕುಟುಂಬ ತಮ್ಮೂರು ಹಾಸನಗೆ ಮರಳಲು ನಿರ್ಧರಿಸಿ, ಮೂಡಬಿದಿರೆಯಿಂದ ಮಂಗಳೂರು ಸರ್ವೀಸ್ ಬಸ್ ಸ್ಟ್ಯಾಂಡ್‌ಗೆ ಆಗಮಿಸಿತ್ತು. ಆದರೆ ಜಿಲ್ಲೆಯಲ್ಲಿ ಲಾಕ್‌ಡೌನ್ ಇದ್ದು ಸದ್ಯಕ್ಕೆ ಬಸ್ ವ್ಯವಸ್ಥೆ ಇಲ್ಲ ಎಂದು ತಿಳಿಸಿದ್ದಾರೆ.
ಈ ಹಿನ್ನಲೆ ದಿಕ್ಕೆ ಕಾಣದ ಆ ಕುಟುಂಬ ಅಲ್ಲೇ ಎರಡು ದಿನ ಸರ್ಮಿಸ್ ಬಸ್ ನಿಲ್ದಾಣದಲ್ಲೇ ವಾಸವಿದ್ದರು. ನಗರದಲ್ಲಿ ಒಂದೆಡೆ ಎಡಬಿಡದೆ ಸುರಿಯುತ್ತಿರುವ ಮಳೆ, ಲಾಕ್‌ಡೌನ್, ಕೊರೋನಾ ಭಯದಿಂದ ಈ ಕುಟುಂಬಕ್ಕೆ ಸಹಾಯ ಮಾಡಲು ಯಾರೂ ಮುಂದೆ ಬಂದಿಲ್ಲ. ಈ ರೀತಿ ಒಂದು ಕುಟುಂಬ ಸರ್ವಿಸ್ ಬಸ್ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಬಗ್ಗೆ ತಿಳಿದ ಪ್ರವೀಣ್ ಪದ್ಮುಂಜ ಎಂಬವರು ಸಾಮಾಜಿಕ ಹೋರಾಟಗಾರ ಸೌರಜ್ ಮಂಗಳೂರು ಗೆ ಕರೆ ಮಾಡಿ ವಿಷಯ ತಿಳಿಸಿದರು.
ತಕ್ಷಣ ಸೌರಜ್ ಶಾಸಕ ವೇದವ್ಯಾಸ್ ಕಾಮತ್‌ಗೆ ಕರೆ ಮಾಡಿ ಮಾಹಿತಿ ತಿಳಿಸಿದರು. ಕೂಡಲೇ ಸ್ಪಂದಿಸಿದ ಶಾಸಕರು, ಪರಿಚಯಸ್ಥ ಮುತಾಲಿಬ್ ಎಂಬವರನ್ನು ಸ್ಥಳಕ್ಕೆ ಕಳಿಸಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯಕ್ಕೆ ಮಾಡಲು ತಿಳಿಸಿದರು. ಈ ಹಿನ್ನಲೆ ಸೌರಜ್ ಮತ್ತು ಮುತಾಲಿಬ್ ಬಡ ಮುಸ್ಲಿಂ ಕುಟುಂಬಕ್ಕೆ ಊಟ ಮಾಡಿಸಿ, ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಇಂದು ಬೆಳಗ್ಗೆ ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಶಾಸಕ ವೇದವ್ಯಾಸ್‌ಕಾಮತ್ ಅವರ ಮಾನವೀಯ ಸ್ಪಂದನೆಗೆ, ಮುತಾಲಿಬ್ ಮತ್ತು ಸೌರಜ್ ಮಂಗಳೂರು ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.