Connect with us

DAKSHINA KANNADA

ಅಭಯ್ ಗೆ ಮತ್ತೆ ಲಕ್ಕು, ಐವನ್- ಮಿಥುನ್ ಕೈ ಗೆ ಚಿಪ್ಪು

ಅಭಯ್ ಗೆ ಮತ್ತೆ ಲಕ್ಕು, ಐವನ್- ಮಿಥುನ್ ಕೈ ಗೆ ಚಿಪ್ಪು

ಮಂಗಳೂರು ನವೆಂಬರ್ 3: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಭಾರೀ ನಿರೀಕ್ಷೆಯ ಕ್ಷೇತ್ರವಾದ ಮುಲ್ಕಿ- ಮೂಡಬಿದಿರೆಗೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಯಾರು ಎನ್ನುವುದು ಕುತೂಹಲ ಮೂಡಿಸಿದೆ. ಈ ಕ್ಷೇತ್ರದಿಂದ ಕಳೆದ 4 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಭಯಚಂದ್ರ ಜೈನ್ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವ ಸುಳಿವು ನೀಡಿರುವ ಹಿನ್ನಲೆಯಲ್ಲಿ ಈ ಕ್ಷೇತ್ರಕ್ಕೀಗ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ.

ಪ್ರಮುಖವಾಗಿ ವಿಧಾನಪರಿಷತ್ ಮುಖ್ಯಸಚೇತಕರಾಗಿರುವ ಐವನ್ ಡಿಸೋಜಾ ಹಾಗೂ ದಕ್ಷಿಣಕನ್ನಡ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಈ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ನಡುವೆ ಮಂಗಳೂರು ಮೇಯರ್ ಕವಿತಾ ಸನಿಲ್ ಹೆಸರೂ ಕೂಡಾ ಕೇಳಿ ಬರುತ್ತಿತ್ತು. ಆದರೆ ಕವಿತಾ ಸನಿಲ್ ಗಿಂತ ಹೆಚ್ಚು ಕಾರ್ಯೋನ್ಮುಖವಾಗಿ ರಂಗಕ್ಕೆ ಇಳಿದಿರುವುದು ಐವನ್ ಮತ್ತು ಮಿಥುನ್ ರೈ. ಈ ಕಾರಣಕ್ಕಾಗಿ ಈ ಕ್ಷೇತ್ರದಲ್ಲಿ ನಡೆಯುವ ಸಣ್ಣ ಕೋಳಿ ಕಟ್ಟ ದಿಂದಿ ಹಿಡಿದು ಕಂಬಳದವರೆಗೆ, ಸತ್ಯ ನಾರಾಯಣ ಪೂಜೆಯಿಂದ ಹಿಡಿದು ಗೋ ಪೂಜೆವರೆಗೂ ಎಲ್ಲೆಂದರಲ್ಲಿ ಈ ಇಬ್ಬರು ನಾಯಕರು ನಾ ಮುಂದು ತಾ ಮುಂದು ಎಂದು ಫೋಸ್ ಕೊಡುತ್ತಿದ್ದಾರೆ.

ಐವನ್ ಡಿಸೋಜಾ ಇದಕ್ಕಿಂದ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಪ್ರಭಾವ ಹಾಗೂ ಅಧಿಕಾರವನ್ನು ಬಳಿಸಿಕೊಂಡು ಮುಲ್ಕಿ-ಮೂಡಬಿದಿರೆ ಕ್ಷೇತ್ರದಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಈ ಇಬ್ಬರ ಹೆಸರೂ ಚುನಾವಣೆ ಘೋಷಣೆಯಾಗುವವರೆ ಮಾತ್ರ ಎನ್ನುವ ಗುಸುಗುಸು ಮಾತು ಇದೀಗ ಕಾಂಗ್ರೇಸ್ ಪಕ್ಷದ ಹೈ ಕಮಾಂಡ್ ಮೂಲದಿಂದಲೇ ರಟ್ಟಾಗಿದೆ. ಈ ಇಬ್ಬರು ಅಭ್ಯರ್ಥಿಯಾಗಲು ನಡೆಸುತ್ತಿರುವ ಪೈಪೋಟಿಯನ್ನು ಕಣ್ಣಿಗೆ ಎಣ್ಣೆ ಹಚ್ಚಿಕೊಂಡು ನೋಡುತ್ತಿರುವ ಹಾಲಿ ಶಾಸಕ ಅಭಯಚಂದ್ರ ಜೈನ್ ಯಾವುದೇ ಸಮಯದಲ್ಲೂ ಮತ್ತೆ ಶಾಸಕ ಸ್ಥಾನದ ಅಭ್ಯರ್ಥಿಯಾಗಲಿದ್ದಾರೆ.

ಈ ಕುರಿತು ಈಗಾಗಲೇ ಪಕ್ಷದ ಹಿರಿಯ ಮುಖಂಡರ ಜೊತೆ ಮಾತುಕತೆ ನಡೆಸಿರುವ ಅಭಯಚಂದ್ರ ಜೈನ್ ಗೆ ಪಕ್ಷದಿಂದಲೂ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ ಐವನ್ ಡಿಸೋಜಾ ಹಾಗೂ ಮಿಥುನ್ ರೈ ಸಾಧ್ಯವಾದಷ್ಟು ಮಟ್ಟಿಗೆ ಕಾಂಗ್ರೇಸ್ ಪಕ್ಷದ ಹಾಗೂ ಸರಕಾರದ ಸಾಧನೆಯ ವಿಚಾರವನ್ನು ಕ್ಷೇತ್ರದ ಜನತೆಗೆ ತಲುಪಿಸುತ್ತಿದ್ದು, ಅಭಯಚಂದ್ರ ಜೈನ ಈ ಇಬ್ಬರನ್ನೂ ಅವರಿಗೆ ತಿಳಿಯದ ರೀತಿಯಲ್ಲಿ ತನ್ನ ಪ್ರಚಾರಕರಾಗಿ ಬಳಸಿಕೊಳ್ಳುತ್ತಿದ್ದಾರೆ.

ಯಾವುದೇ ಕಾರಣಕ್ಕೂ ಈ ಇಬ್ಬರು ತನ್ನ ಪಕ್ಷದ ವಿರುದ್ಧವಾಗಿ ಹಾಗೂ ತನ್ನ ವಿರುದ್ಧವಾಗಿ ಕ್ಷೇತ್ರದಲ್ಲಿ ಮಾತನಾಡಲು ಸಾಧ್ಯವೇ ಇಲ್ಲ ಎಂದು ತಿಳಿದಿರುವ ಅಭಯಚಂದ್ರ ಜೈನ್ ತನ್ನ ಚಾಣಾಕ್ಷ ನಡೆಯನ್ನು ಇನ್ನು ಕೆಲವೇ ದಿನಗಳಲ್ಲಿ ಬಹಿರಂಗಪಡಿಸಲಿದ್ದಾರೆ. ಅಭ್ಯರ್ಥಿ ವಿಚಾರದಲ್ಲಿ ಐವನ್ ಹಾಗೂ ಮಿಥುನ್ ರೈ ನಡುವೆ ಶೀತಲ ಸಮರ ಈಗಾಗಲೇ ಆರಂಭಗೊಂಡಿದ್ದು, ಇದು ಮುಂದಿನ ದಿನಗಳಲ್ಲಿ ತಾರಕ್ಕೇಳುವ ಸಾಧ್ಯತೆಯೂ ಹೆಚ್ಚಾಗಿದೆ.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಲಿರುವ ಅಭಯಚಂದ್ರ ಜೈನ್ ತಾನೇ ಅಭ್ಯರ್ಥಿಯಾಗುತ್ತೇನೆ ಎಂದು ಹೇಳುವ ಸಾಧ್ಯತೆ ನೂರಕ್ಕೆ ನೂರು ನಿಜವಾಗಿದೆ. ಇದರಿಂದ ಆಕಾಂಕ್ಷಿಗಳಾಗಲು ಕಾಲಿಗೆ ಚಕ್ರ ಕಟ್ಟಿ ತಿರುಗುತ್ತಿರುವ ಐವನ್ ಹಾಗೂ ಮಿಥುನ್ ರೈ ಯವರ ಟಯರ್ ಯಾವುದೇ ಕ್ಷಣದಲ್ಲೂ ಪಂಕ್ಚರ್ ಆಗಲಿದೆ. ರಾಜಕೀಯದಲ್ಲಿ ಚಾಣಾಕ್ಷ ನಡೆಯನ್ನೇ ಇಟ್ಟಿರುವ ಅಭಯಚಂದ್ರ ಜೈನ್  ಇನ್ನೊಂದು ಮಾಸ್ಟರ್ ಸ್ಟ್ರೋಕ್ ಸದ್ಯದಲ್ಲೇ  ಕೊಡಲಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *