BANTWAL
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಮುಳಿಯ ಶಂಕರ ಭಟ್
ಬಂಟ್ವಾಳ : ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಮುಳಿಯ ಶಂಕರ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ.
ನಿವೃತ್ತ ಅಧ್ಯಾಪಕರಾಗಿರುವ ಮುಳಿಯ ಶಂಕರ ಭಟ್ ಅವರು ಮಕ್ಕಳ ಸಾಹಿತ್ಯದಿಂದ ತೊಡಗಿ ಆಧ್ಯಾತ್ಮ, ಧಾರ್ಮಿಕ ಸಹಿತ ವೈವಿಧ್ಯಮಯ ಸಾಹಿತ್ಯ ರಚನೆಗಳನ್ನು ಮಾಡಿದ್ದು, ಸುಮಾರು 19ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಪತ್ರಕರ್ತರಾಗಿ, ಗಮಕಿಯಾಗಿಯೂ ತೊಡಗಿಸಿಕೊಂಡಿದ್ದ ಅವರ ಕೃತಿ ಕೇರಳ ಶಾಲಾ ಪಠ್ಯದಲ್ಲಿ ಸೇರ್ಪಡೆಯಾಗಿದೆ. 2002ರಲ್ಲಿ ಪುತ್ತೂರಿನಲ್ಲಿ ನಡೆದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಅವರು, ಒಡಿಯೂರಿನಲ್ಲಿ 2006ರಲ್ಲಿ ನಡೆದ ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. 2021ರಲ್ಲಿ ಮಂಚಿಯಲ್ಲಿ ನಡೆದ ತಾಲೂಕು ಗಮಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರಿಗೆ ಆಳ್ವಾಸ್ ನುಡಿಸಿರಿ ಸಹಿತ ಹಲವೆಡೆ ಸನ್ಮಾನಗಳು ಸಂದಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ತಿಳಿಸಿದ್ದಾರೆ.
ಪತ್ರಕರ್ತರಾಗಿ ವೃತ್ತಿಜೀವನ ನಡೆಸಿದ ಶಂಕರ ಭಟ್, ನವಭಾರತ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಿದವರು. ಬಳಿಕ ಅಧ್ಯಾಪನ ವೃತ್ತಿಗೆ ತೊಡಗಿಸಿಕೊಂಡು, ಮೊಂಟೆಪದವು ಪ್ರಾಥಮಿಕ, ಪ್ರೌಢಶಾಲೆ, ಮುಡಿಪು ಜ್ಯೂನಿಯರ್ ಕಾಲೇಜು, ಕಪಿತಾನಿಯೋ ತರಬೇತಿ ಶಾಲೆಗಳಲ್ಲಿ 1976ರಿಂದ 1985ರವರೆಗೆ ಕೆಲಸ ಮಾಡಿದರು. ಬಳಿಕ 1986ರಿಂದ 2007ರವರೆಗೆ ಮಂಜೇಶ್ವರದ ಎಸ್.ಎ.ಟಿ. ಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿ ಕೆಲಸ ಮಾಡಿದರು. ಒಂದು ವರ್ಷ ಮುಖ್ಯೋಪಾಧ್ಯಾಯರಾಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದರು. ಕೇರಳ ಸರಕಾರದ ಪಠ್ಯಪುಸ್ತಕ ರಚನಾ ಸಮಿತಿಯ ಸಂಪನ್ಮೂಲ ವ್ಯಕ್ತಿಯಾಗಿ 12 ವರ್ಷ ಅವರು ಭಾಗಿಯಾಗಿದ್ದರು.