LATEST NEWS
ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ಜಗದಂಬಾ ಹುಲಿ ಮುಡಿಗೆ ಪಿಲಿಪರ್ಬ- 2023 ರ ಕಿರೀಟ
ಮಂಗಳೂರು ಅಕ್ಟೋಬರ್ 22: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ, ನಗರದ ಕೇಂದ್ರ ಮೈದಾನದಲ್ಲಿ ನಡೆದ “ಕುಡ್ಲದ ಪಿಲಿಪರ್ಬ-2023” ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು,15 ತಂಡಗಳ ತೀವ್ರ ಜಿದ್ದಾಜಿದ್ದಿನ ಸ್ಪರ್ಧಾಕೂಟದಲ್ಲಿ ಅಂತಿಮವಾಗಿ, “ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ಜಗದಂಬಾ ಹುಲಿ” ತಂಡವು ಪಿಲಿಪರ್ಬ- 2023 ರ ಕಿರೀಟ ಮುಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನದ ಪ್ರಶಸ್ತಿಯನ್ನು ನಂದಿಗುಡ್ಡ ಫ್ರೆಂಡ್ಸ್ ಬಾಬುಗುಡ್ಡ ತಂಡವು ಪಡೆದುಕೊಂಡರೆ, ಪುರಲ್ದಪ್ಪೆನ ಮೋಕೆದ ಬೊಲ್ಲಿಲು ಪೊಳಲಿ ಟೈಗರ್ಸ್ ತಂಡವು ತೃತೀಯ ಸ್ಥಾನವನ್ನು ಅಲಂಕರಿಸಿತು.
ಇನ್ನು ಪಿಲಿಪರ್ಬದ ವಿಶೇಷ ಬಹುಮಾನಗಳಾದ “ಕಪ್ಪು ಪಿಲಿ” ಪ್ರಶಸ್ತಿಯನ್ನು ಎಸ್.ಎಫ್.ಸಿ ಸೋಮೇಶ್ವರ ತಂಡ ಪಡೆದುಕೊಂಡರೆ, ಟೀಮ್ ಕಲ್ಲೇಗ ಟೈಗರ್ಸ್ ಪುತ್ತೂರು ತಂಡವು “ಮರಿ ಹುಲಿ” ಪ್ರಶಸ್ತಿಯನ್ನು, ಬಹು ನಿರೀಕ್ಷಿತ ಪ್ರಶಸ್ತಿಯಾದ “ಪರ್ಬದ ಪಿಲಿ”ಯನ್ನು ಮಂಗಳೂರ್ ಫ್ರೆಂಡ್ಸ್ ಟೈಗರ್ಸ್ ಮುಳುಹಿತ್ಲು ಪಡೆದುಕೊಂಡಿತು. ಶಿಸ್ತಿನ ತಂಡವಾಗಿ ಶಿವಶಕ್ತಿ ಟೈಗರ್ ಕುಂಜತ್ತೂರು ಮಂಜೇಶ್ವರ ಹೊರ ಹೊಮ್ಮಿದರೆ, ಬಣ್ಣಗಾರಿಕೆಯಲ್ಲಿ ಎಸ್.ಕೆ.ಬಿ ಟೈಗರ್ಸ್ ಕುಂಪಲ ತಂಡವು ಹೆಚ್ಚುಗಾರಿಕೆ ಪಡೆಯಿತು. ಮುಡಿ ವಿಭಾಗದಲ್ಲಿ ವಿ.ಸಿ.ಎಸ್, ಮೂಡುಶೆಡ್ಡೆ (ವಿಷ್ಣು ಪಿಲಿಕುಲು) ಪ್ರಶಸ್ತಿ ಪಡೆದುಕೊಂಡರೆ, ಧರಣಿ ಮಂಡಲ ಹಾಗೂ ತಾಸೆ ವಿಭಾಗದಲ್ಲಿ ಯಂಗ್ ಬಾಯ್ಸ್ ಮುಳುಹಿತ್ಲು ಮಂಗಳಾದೇವಿ ಹುಲಿ ತಂಡ ಎರಡೂ ಪ್ರಶಸ್ತಿಗಳನ್ನು ಬಾಚಿಕೊಂಡಿತು.
ಇದಕ್ಕೂ ಮೊದಲು ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಸ್ಪರ್ಧಾಕೂಟಕ್ಕೆ ಚಾಲನೆ ನೀಡಿ ಪಿಲಿಪರ್ಬದ ರೂವಾರಿ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಅವರ ತಂಡದ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಿದರು.
ಹಿರಿಯರು, ಮಕ್ಕಳು, ಮಹಿಳೆಯರು ಸೇರಿದಂತೆ ಹಲವರು ಮೈದಾನದಲ್ಲಿ ಕಿಕ್ಕಿರಿದು ಅತ್ಯುತ್ಸಾಹದಿಂದ ಪಿಲಿಪರ್ಬದಲ್ಲಿ ಭಾಗವಹಿಸಿದ್ದು ಕಂಡು ಬಂದಿತು. ಹಲವು ಪುಟಾಣಿಗಳು ಹುಲಿ ವೇಷದಲ್ಲಿ ಕಂಗೊಳಿಸುತ್ತಿದ್ದದ್ದು ಕಾರ್ಯಕ್ರಮದ ಸಂಭ್ರಮವನ್ನು ಹೆಚ್ಚಿಸಿತ್ತು.
ಕಾರ್ಯಕ್ರಮದ ಕೊನೆಯಲ್ಲಿ ಪಿಲಿಪರ್ಬ-2023 ರ ಯಶಸ್ಸನ್ನು ಸಂಪೂರ್ಣವಾಗಿ ತುಳುನಾಡಿನ ಪವಿತ್ರ ಮಣ್ಣಿಗೆ ಅರ್ಪಿಸಿ ಇದಕ್ಕೆ ಸಹಕರಿಸಿದ ಸಮಸ್ತ ಜನತೆಗೆ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಧನ್ಯವಾದಗಳನ್ನು ಸಮರ್ಪಿಸಲಾಯಿತು.