LATEST NEWS
ಎಂಆರ್ ಪಿಎಲ್ ನಲ್ಲಿ 120 ಅಡಿ ಎತ್ತರದಿಂದ ಬಿದ್ದು ಸಾವನಪ್ಪಿದ ಗುತ್ತಿಗೆ ಕಾರ್ಮಿಕ
ಸುರತ್ಕಲ್ ಮೇ 29 : ಎಂಆರ್‌ಪಿಎಲ್‌ನ ಹೈಡ್ರೋಜನ್ ಘಟಕದ ನೀರಿನ ಸೋರಿಕೆ ಸರಿಪಡಿಸಲು ಹೋಗಿದ್ದ ವ್ಯಕ್ತಿಯೊಬ್ಬರು 120 ಅಡಿ ಎತ್ತರದಿಂದ ಬಿದ್ದು ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೂಲತಃ ಜಾರ್ಖಾಂಡ್‌ನ ರಾಂಚಿ ಜಿಲ್ಲೆಯ ಮಂಗಳ್ ಓರನ್ (38) ಎಂದು ಗುರುತಿಸಲಾಗಿದೆ. ಅವರು ಪ್ರಸ್ತುತ ಜೋಕಟ್ಟೆ ಪ್ರದೇಶದಲ್ಲಿ ವಾಸವಾಗಿದ್ದರು.
ಹೈಡ್ರೋಜನ್ ಘಟಕದ ಸುಮಾರು 120 ಅಡಿ ಎತ್ತರದಲ್ಲಿರುವ ಹೈಡೋಕ್ಯಾಕರ್‌ನಲ್ಲಿ ನೀರಿನ ವೇಗ ಪರಿಶೀಲಿಸಲು ಮಂಗಳ ಓರನ್ ತೆರಳಿದ್ದರು. ಆಗ ಅಲ್ಲಿ ನೀರಿನ ಸೋರಿಕೆ ಕಂಡು ಬಂದಿತ್ತು. ಅದನ್ನು ಸರಿಪಡಿಸುವ ಸಂದರ್ಭ ಸೋರುವಿಕೆಯಲ್ಲಿ ನೀರಿನ ಹರಿವು ಒಮ್ಮೆಲೇ ಹೆಚ್ಚಾಗಿ ಮಂಗಳ್ ಓರನ್ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಕೂಡಲೇ ಅಲ್ಲಿನ ಸಿಬ್ಬಂದಿ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರು ಮೃತಪಟ್ಟಿದ್ದಾರೆ.
ಘಟನೆ ಕುರಿತಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.