Connect with us

    MANGALORE

    MRPL ಕೋಕ್ ಸಲ್ಫರ್ ಘಟಕಕ್ಕೆ ಬೀಗ ಜಡಿಯಲು ಹೋರಾಟ ಸಮಿತಿ‌ ಆಗ್ರಹ

    MRPL ಕೋಕ್ ಸಲ್ಫರ್ ಘಟಕಕ್ಕೆ ಬೀಗ ಜಡಿಯಲು ಹೋರಾಟ ಸಮಿತಿ‌ ಆಗ್ರಹ

    ಮಂಗಳೂರು ಅಕ್ಟೋಬರ್ 25: ನಿಯಮ ಮೀರಿ ಜನವಸತಿ ಪ್ರದೇಶದಲ್ಲಿ ಕೋಕ್ ಸಲ್ಫರ್ ಘಟಕ ಸ್ಥಾಪಿಸಿ ಜೋಕಟ್ಟೆ, ಕಳವಾರು ಭಾಗದ ಜನ ನರಕ ಸದೃಶ ಜೀವನ ನಡೆಸುವಂತಾಗಿದೆ. ಕೋಕ್ ಹಾರು ಬೂದಿ, ಸಲ್ಫರ್ ವಾಸನೆ, ಶಬ್ದ ಮಾಲಿನ್ಯ ದಿಂದ ಜನ ಕಂಗಾಲಾಗಿದ್ದು, ಕಳೆದ ರಾತ್ರಿಯಿಂದ ಕೋಕ್ ಹಾರು ಬೂದಿ ಮಂಜಿನಂತೆ ಊರಿಡಿ ಸುರಿದಿದೆ. ಊರಿನ ಮಂದಿರ, ಮಸೀದಿ ಮಾತ್ರವಲ್ಲದೆ ಶಾಲೆ, ಅಂಗನವಾಡಿಯ ಒಳಗಡೆಯೂ ಕೋಕ್ ಪುಡಿ ಸುರಿದಿದ್ದು, ಅಂಗನವಾಡಿಯ ಪುಟಾಣಿ ಮಕ್ಕಳ ಶ್ವಾಸಕೋಶದ ಮೇಲೆ ಇದು ಗಂಭೀರ ಪರಿಣಾಮ ಬೀರುವಂತಿದೆ.

    ನಾಗರಿಕ ಹೋರಾಟ ಸಮಿತಿ MRPL ನ ನಿಯಮ ಬಾಹಿರ ಘಟಕದ ವಿರುದ್ದ ಸತತವಾಗಿ ಒಂದೂವರೆ ವರ್ಷ ನಡೆಸಿದ ಹೋರಾಟದ ಫಲವಾಗಿ 2016 ಎಪ್ರಿಲ್ ನಲ್ಲಿ ಸರಕಾರ ಪರಿಹಾರದ ಭಾಗವಾಗಿ ಗಜೆಟ್ ನೋಟಿಫಿಕೇಷನ್ ಹೊರಡಿಸಿತ್ತು. ಈ ಆದೇಶದಂತೆ 2017 ರ ಜೂನ್ ಒಳಗಡೆ ಕೋಕ್ ಡಂಪಿಂಗ್, ಲೋಡಿಂಗ್ ಯಾರ್ಡ್ ನ್ನು ಜನವಸತಿ ಪ್ರದೇಶದಿಂದ ಕಂಪೆನಿಯ ಒಳಭಾಗಕ್ಕೆ ವರ್ಗಾಯಿಸಬೇಕು. ಜನ ವಸತಿ ಮತ್ತು ಕಂಪೆನಿಯ ಮಧ್ಯೆ ಇಪ್ಪತ್ತೇಳು ಎಕರೆ ಭೂಮಿಯನ್ನು ವಶಕ್ಕೆ ಪಡೆದು ಆ ಭೂಮಿಯಲ್ಲಿ ಹಸಿರು ವಲಯ ನಿರ್ಮಿಸಬೇಕು ಎಂಬ ಪ್ರಮುಖ ಪರಿಹಾರ ಕ್ರಮಗಳು ಒಳಗೊಂಡಿದ್ದವು. ಈ ಆದೇಶದ ಹಿನ್ನಲೆಯಲ್ಲಿ ಹೋರಾಟ ಸಮಿತಿ ಪ್ರತಿಭಟನೆಯನ್ನು ಕೈಬಿಟ್ಟಿತ್ತು. ಆದರೆ ಕಂಪೆನಿ ತಾನೇ ಒಪ್ಪಿಕೊಂಡ ಸರಕಾರಿ ಆದೇಶವನ್ನು ಪೂರ್ಣವಾಗಿ ಕಡೆಗಣಿಸಿದ್ದು, ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಇದರ ಪರಿಣಾಮವಾಗಿ ಜೋಕಟ್ಟೆ ಪ್ರದೇಶದಲ್ಲಿ ಮಾಲಿನ್ಯದ ಸಮಸ್ಯೆ ಗಂಭೀರ ಸ್ವರೂಪ ತಾಳಿದೆ.

    ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ, ಸರಕಾರಿ ಆದೇಶಗಳನ್ನು ಗಾಳಿಗೆ ತೂರುವ mrpl ನ ನಿಯಮ ಬಾಹಿರ ಕೋಕ್ ಸಲ್ಫರ್ ಘಟಕಕ್ಕೆ ಜಿಲ್ಲಾಡಳಿತ ಬೀಗ ಜಡಿಯಬೇಕು, ಪರಿಹಾರ ಕ್ರಮ ಕೈಗೊಳ್ಳುವವರೆಗೆ ಕಾರ್ಯಾಚರಣೆಗೆ ಅವಕಾಶ ನೀಡಬಾರದು ಎಂದು ನಾಗರಿಕ ಹೋರಾಟ ಸಮಿತಿ, ಜೋಕಟ್ಟೆಯ ಮುಖಂಡ ಮುನೀರ್ ಕಾಟಿಪಳ್ಳ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಮತ್ತೊಂದು ಸುತ್ತಿನ ತೀವ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply