KARNATAKA
ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾದ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್
ಬೆಂಗಳೂರು, ಅಗಸ್ಟ್ 6: ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿಪೂಜೆ ನೆರವೇರಿಸುವ ಮೊದಲು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾಡಿರುವ ಟ್ವೀಟ್‍ವೊಂದು ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಯೋಧ್ಯೆ ತನ್ನ ಪ್ರೀತಿಯ ರಾಜನನ್ನು ಮರಳಿ ಮನೆಗೆ ಸ್ವಾಗತಿಸಲು ಸಜ್ಜಾಗಿದೆ! ಎಂಬ ಸಾಲುಗಳ ಮೂಲಕ ಶೋಭಾ ಕರಂದ್ಲಾಜೆ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಚಿತ್ರದಲ್ಲಿ, ರಾಮನನ್ನು ಬಾಲಕನಂತೆ, ಮೋದಿಯನ್ನು ಹಿರಿಯನಂತೆ ಚಿತ್ರೀಕರಿಸಿ ಮೋದಿ ರಾಮನ ಕೈ ಹಿಡಿದು ದೇಗುಲಕ್ಕೆ ಕರೆದೊಯ್ಯುತ್ತಿರುವಂತೆ ಬಿಂಬಿಸಲಾಗಿದೆ.
ಸಂಸದೆ ಶೋಭಾ ಕರಂದ್ಲಾಜೆ ಮಾಡಿರುವ ಈ ಟ್ವೀಟ್ ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಮೋದಿ ರಾಮನಿಗಿಂತಲೂ ದೊಡ್ಡವರೇ? ಮೋದಿ ರಾಮನನ್ನು ಮೀರಿದವರೇ ಎಂಬ ಹಲವಾರು ಪ್ರಶ್ನೆಗಳು ಕೇಳಿಬಂದಿವೆ. ಅಲ್ಲದೆ, ಚಿತ್ರವನ್ನು ಅಳಿಸುವಂತೆಯೂ ಹಲವರು ಸಲಹೆ ನೀಡಿದ್ದಾರೆ. ಕೆಲ ಮಂದಿ ಚಿತ್ರವನ್ನು ಮೆಚ್ಚಿದ್ದಾರೆ. ಆದರೆ, ಬಹುತೇಕರು ಚಿತ್ರದ ಸನ್ನಿವೇಶವನ್ನು ವಿರೋಧಿಸಿದ್ದಾರೆ.
ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದು, ಪ್ರೀತಿಯನ್ನೂ ಕಲಿತಿಲ್ಲ, ತ್ಯಾಗವನ್ನು ಕಲಿತಿಲ್ಲ ಕರುಣೆ , ಪ್ರೇಮವನ್ನೂ ಕಲಿತಿಲ್ಲ ರಾಮನಿಗಿಂತಲೂ ಮೇಲು ಎಂದು ತೋರಿಸುವ ನೀನು ಶ್ರೀ ರಾಮಚರಿತ ಮಾನಸದ ಯಾವ ಭಾಗ ಕಲಿತಿರುವೆ? ಹೀಗೆಂದು ಕಾಂಗ್ರೆಸ್ ನಾಯಕ ಶಶಿತರೂರ್ ಅವರು ಪ್ರಶ್ನೆ ಮಾಡಿದ್ದಾರೆ.
ಹಿಂದುತ್ವದ ಪ್ರಕಾರ ಮೋದಿ ರಾಮನನ್ನು ಮುನ್ನಡೆಸುತ್ತಾನೆ. ರಾಮ ಮೋದಿಯನ್ನು ಮುನ್ನಡೆಸುವುದಿಲ್ಲ? ಇದು ಹಿಂದೂ ಧರ್ಮವಲ್ಲ,’ ಎಂದು ಲೇಖಕ, ಇತಿಹಾಸ ತಜ್ಞ ದೇವದತ್ತ ಪಟ್ಟನಾಯಕ ಟ್ವೀಟ್ ಮಾಡಿದ್ದಾರೆ.
ಶೀಘ್ರದಲ್ಲೇ ಪ್ರಧಾನಿ ಕ್ಯಾಬಿನೆಟ್ ಪುನರಚನೆ ಮಾಡುತ್ತಿದ್ದಾರೆಯೇ? ಬಿಜೆಪಿ ಸಂಸದರು ಹೋರಾಟ ನಡೆಸುತ್ತಿರುವಂತೆ ಕಾಣುತ್ತಿದೆ. ಶ್ರೇಷ್ಠ ರಾಮ ಭಕ್ತರು ಎಂಬ ಖ್ಯಾತಿಗಾಗಿ ಅಲ್ಲ. ಆದರೆ ಶ್ರೇಷ್ಠ ವ್ಯಕ್ತಿಪೂಜಕ ಎಂದು ಕರೆಸಿಕೊಳ್ಳಲು! ಆದರೆ ಇದು ವ್ಯಕ್ತಿ ಪೂಜೆಯನ್ನೂ ಮೀರಿದ್ದಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.