KARNATAKA
ಬೆಂಗಳೂರು – ಕೌಟುಂಬಿಕ ಕಲಹಕ್ಕೆ ಪುಟಾಣಿ ಮಕ್ಕಳನ್ನು ಸಾಯಿಸಿ ಆತ್ಮಹತ್ಯೆ ಮಾಡಿಕೊಂಡ ತಾಯಿ
ಬೆಂಗಳೂರು ಡಿಸೆಂಬರ್ 12: ಕೌಟುಂಬಿಕ ಕಲಹಕ್ಕೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ನಡೆದಿದೆ.
ಮಗ ಶ್ರೇಯಾನ್ (6) ಹಾಗೂ ಮಗಳು ಚಾರ್ವಿ (1 ವರ್ಷ 9 ತಿಂಗಳು) ಹತ್ಯೆ ಮಾಡಿದ ಬಳಿಕ ತಾಯಿ ಕುಸುಮಾ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2015ರಲ್ಲಿ ವಿವಾಹವಾಗಿದ್ದ ಸುರೇಶ್ ಹಾಗೂ ಕುಸುಮಾ ದಂಪತಿ ಕೊಡಿಗೇಹಳ್ಳಿಯ ಬಾಲಾಜಿ ಲೇಔಟ್‌ನಲ್ಲಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಕ್ಕಳೊಂದಿಗೆ ವಾಸವಿದ್ದರು. ಸುರೇಶ್ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದರು. ತಡರಾತ್ರಿ ಮನೆಯಲ್ಲಿದ್ದ ಕುಸುಮಾ “ನಮ್ಮ ಸಾವಿಗೆ ನಾವೇ ಕಾರಣ” ಎಂದು ಡೆತ್ ನೋಟ್ ಬರೆದಿಟ್ಟು, ಮಕ್ಕಳನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೌಟುಂಬಿಕ ಕಲಹದಿಂದ ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನಾ ಸ್ಥಳದಲ್ಲಿ ಡೆತ್ ನೋಟ್ ಸಹ ಸಿಕ್ಕಿದ್ದು, ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ವಿ. ಸಜೀತ್ ತಿಳಿಸಿದ್ದಾರೆ.