LATEST NEWS
ಪೊಲೀಸ್ ಆಯ್ತು ಇದೀಗ ಪತ್ರಕರ್ತರಿಗೂ ತಟ್ಟಿದ ನೈತಿಕ ಪೊಲೀಸ್ ಗಿರಿ ಬಿಸಿ….!!
ಮಂಗಳೂರು, ಜುಲೈ 31: ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿ ಇದೀಗ ಎಲ್ಲೆಡೆ ಹಬ್ಬಲಾರಂಭಿಸಿದ್ದು, ಮೊನ್ನೆ ತಾನೆ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ನೈತಿಕ ಪೊಲೀಸ್ ಗಿರಿ ನಡೆದ ಪ್ರಕರಣದ ಬೆನ್ನಲ್ಲೆ ಇದೀಗ ಪತ್ರಕರ್ತರಿಗೂ ನೈತಿಕ ಪೊಲೀಸ್ ಗಿರಿ ಬಿಸಿ ತಟ್ಟಿದೆ.
ವೆಬ್‌ಸೈಟ್‌ವೊಂದರ ಯುವ ವರದಿಗಾರ ಅಭಿಜಿತ್ ಜುಲೈ 26ರಂದು ತನ್ನ ಕಾಲೇಜಿನ ಸಹಪಾಠಿ ಯುವತಿಯ ಜೊತೆ ಊಟ ಮುಗಿಸಿ ಹೊಟೇಲ್ ನಿಂದ ಹೊರಬರುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಬಂದು ‘ನೀನು ಬ್ಯಾರಿಯೊಂದಿಗೆ ಏನು ಮಾತನಾಡುತ್ತಿ. ನೀನು ಬ್ಯಾರಿಯಾ? ಇಲ್ಲಿಂದ ಹೊರಡು’ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭ ಅಭಿಜಿತ್ ತಾನು ವೆಬ್‌ಸೈಟ್‌ವೊಂದರ ವರದಿಗಾರನೆಂದು ತನ್ನ ಐಡಿ ಕಾರ್ಡ್ ತೋರಿಸಿದರೂ ಅಪರಿಚಿತ ವ್ಯಕ್ತಿ ಮತ್ತೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಪರಿಚಿತ ವ್ಯಕ್ತಿಯ ಜೊತೆ ಇನ್ನೂ ಒಬ್ಬ ಇದ್ದ ಎಂದು ಹೇಳಲಾಗಿತ್ತು.
ಘಟನೆ ಬಗ್ಗೆ ಅಭಿಜಿತ್ ಕೋಲ್ಪೆ ಅವರು ಕಾವೂರು ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕೋಟೆಕಾರು ನಿವಾಸಿ ಚೇತನ್ (38) ಮತ್ತು ಯೆಯ್ಯಾಡಿ ನಿವಾಸಿ ನವೀನ್(39) ಬಂಧಿತರು. ವಿಚಾರಣೆ ವೇಳೆ ಆರೋಪಿಗಳು ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಂಡಿರುವುದು ಬೆಳಕಿಗೆ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.