LATEST NEWS
ನೈತಿಕ ಪೊಲೀಸ್ ಗಿರಿ ಆರೋಪಿಗಳನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ ಪೊಲೀಸರು
ಮಂಗಳೂರು ಸೆಪ್ಟೆಂಬರ್ 28: ಸುರತ್ಕಲ್ ಟೋಲ್ ಗೇಟ್ ಬಳಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳಿಗೆ ಠಾಣೆಯಲ್ಲೇ ಜಾಮೀನು ನೀಡಿ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನ ವಿಧ್ಯಾರ್ಥಿಗಳು ಬೀಚ್ ಗೆ ಹೋಗಿ ವಾಪಸ್ ಬರುವಾಗ ಮಂಗಳೂರಿನ ಸುರತ್ಕಲ್ ಟೋಲ್‌ಗೇಟ್ ಬಳಿ ಭಜರಂಗ ದಳ ಕಾರ್ಯಕರ್ತರು ತಡೆದಿದ್ದಾರೆ. ಅನ್ಯಕೋಮಿನ ಯುವಕ-ಯುವತಿಯರ ಕಾರನ್ನು ನಿಲ್ಲಿಸಿ ಪ್ರಶ್ನಿಸಲು ಮುಂದಾದರು. ಯುವತಿಯರಿಗೆ ಮುಸ್ಲಿಂ ಯುವಕರ ಜೊತೆ ಏಕೆ ಸುತ್ತಾಡುತ್ತಿದ್ದೀರಿ ಎಂದು ಪ್ರಶ್ನಿಸಿ ನಿಂದಿಸಿದ್ದಾರೆ. ಈ ವೇಳೆ ಹಿಂದೂ ಸಂಘಟನೆ ಯುವಕರು ಮತ್ತು ಮುಸ್ಲಿಂ ಯುವಕರ ನಡುವೆ ಜಗಳ ಆರಂಭವಾಗಿ ಅನ್ಯಕೋಮಿನ ಯುವಕ, ಯುವತಿಯರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ ಈ ಸಂದರ್ಭ ಸ್ಥಳದಲ್ಲಿ ಇನ್ಸ್ಪೆಕ್ಟರ್ ಶರೀಫ್ ಕಾರಿನ ಮೇಲೆ ಯುವಕರ ಗುಂಪಿನಿಂದ ಆಗುತ್ತಿದ್ದ ದಾಳಿ ತಡೆದು ಜಗಳವನ್ನು ನಿಯಂತ್ರಿಸಿದರು.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರ ವೈರಲ್ ಆಗುತ್ತಲೇ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆಯು ಸೋಮವಾರ ರಾತ್ರಿ ಬಜರಂಗ ದಳದ ಜಿಲ್ಲಾ ಪ್ರಮುಖ ಪ್ರೀತಂ ಶೆಟ್ಟಿ, ಬಜರಂಗ ದಳ ಸುರತ್ಕಲ್ ಪ್ರಖಂಡ ಪ್ರಮುಖ ಅರ್ಶಿತ್, ಶ್ರೀನಿವಾಸ್, ರಾಕೇಶ್, ಅಭಿಷೇಕ್ ಎಂಬವರನ್ನು ಬಂಧಿಸಿತ್ತು. ಬಂಧಿತ ಆರೋಪಿಗಳ ವಿರುದ್ಧ ಐಪಿಎಸ್ ಸೆಕ್ಷನ್ 341, 323, 504ರಡಿ ಪ್ರಕರಣ ದಾಖಲಿಸಿ ಠಾಣೆಯಲ್ಲೇ ಜಾಮೀನು ನೀಡಿ ಬಿಡುಗಡೆಗೊಳಿಸಿದ್ದಾರೆ. ಆರೋಪಿಗಳಿಗೆ ಠಾಣೆಯಲ್ಲಿ ಜಾಮೀನು ನೀಡಿದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರ ಕಾರ್ಯವೈಖರಿಗೆ ಬಗ್ಗೆ ಜನರು ಅನುಮಾನ ವ್ಯಕ್ತಪಡಿಸಿದ್ದಾರೆ.