LATEST NEWS
ಮಂಕಿ ಪಾಕ್ಸ್ ರೋಗ ಹರಡದಂತೆ ತಡೆಯಲು ಸಕಲ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ
ಮಂಗಳೂರು ಜುಲೈ 20: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಕಿ ಪಾಕ್ಸ್ ರೋಗ ಹರಡದಂತೆ ತಡೆಯಲು ಸಕಲ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಯಾವುದೇ ವ್ಯಕ್ತಿಗಳಲ್ಲಿ ಜ್ವರ ಹಾಗೂ ಚರ್ಮಗಳಲ್ಲಿ ಗುಳ್ಳೆಗಳು ಕಾಣಿಸಿಕೊಂಡಿದ್ದು ಕಂಡು ಬಂದರೆ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರನ್ನು ಜಿಲ್ಲಾಧಿಕಾರಿ ಕೋರಿದ್ದಾರೆ.
ಪಕ್ಕದ ಕೇರಳ ರಾಜ್ಯದಲ್ಲಿ ಮಂಕಿ ಪಾಕ್ಸ್ ಪ್ರಕರಣಗಳು ಪತ್ತೆಯಾಗಿವೆ. ವಿದೇಶದಲ್ಲಿ ನೆಲೆಸಿರುವ ಕೇರಳಿಗರಲ್ಲಿ ಅನೇಕರು ತವರಿಗೆ ಮರಳುವಾಗ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ರಸ್ತೆ ಮಾರ್ಗವಾಗಿ ಊರು ತಲುಪುತ್ತಾರೆ. ಹಾಗಾಗಿ ಮಂಗಳೂರಿನ ವಿಮಾನ ನಿಲ್ದಾಣದ ಸಿಬ್ಬಂದಿಗೂ ಮಂಕಿ ಪಾಕ್ಸ್ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ’ ಎಂದರು.
ಪ್ರಯಾಣಿಕರಲ್ಲಿ ಯಾರಾದರೂ ಜ್ವರ ಹೊಂದಿದ್ದಾರೆಯೇ, ಅವರ ಚರ್ಮದಲ್ಲಿ ಗುಳ್ಳೆಗಳು ಕಾಣಿಸಿಕೊಂಡಿವೆಯೇ ಎಂಬುದನ್ನು ಅವರು ವಿಮಾನದಿಂದ ಇಳಿಯುವ ಮುನ್ನವೇ ಪತ್ತೆಹಚ್ಚಲು ವಿಮಾನಯಾನ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರಲ್ಲಿ ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಅವರನ್ನು ಪ್ರತ್ಯೇಕಿಸಬೇಕು. ವಿಮಾನ ನಿಲ್ದಾಣದಲ್ಲಿರುವ ಆರೋಗ್ಯಾಧಿಕಾರಿಗಳಿಂದ ತಪಾಸಣೆ ಮಾಡಿಸಬೇಕು. ಆಗಿಂದಾಗ್ಗೆ ಈ ಬಗ್ಗೆ ಮನವರಿಕೆ ಮಾಡಬೇಕು’ ಎಂದು ಸಲಹೆ ನೀಡಿದರು.
ವಿಮಾನವು ಇಳಿದ ಬಳಿಕವೂ ಪ್ರಯಾಣಿಕರಲ್ಲಿ ಜ್ವರ ಹಾಗೂ ಚರ್ಮದ ಗುಳ್ಳೆಗಳಿವೆಯೇ ಎಂಬುದನ್ನು ಮೇಲ್ವಿಚಾರಣೆ ಸಿಬ್ಬಂದಿ ಮತ್ತೊಮ್ಮೆ ಖಚಿತ ಪಡಿಸಿಕೊಳ್ಳಬೇಕು. ರೋಗ ಲಕ್ಷಣಗಳಿರುವ ಪ್ರಯಾಣಿಕರನ್ನು ಪ್ರತ್ಯೇಕಿಸಿ ಆಂಬುಲೆನ್ಸ್ ಮೂಲಕ ವೆನ್ಲಾಕ್ ಆಸ್ಪತ್ರೆಯಲ್ಲಿ ಮಂಕಿ ಫಾಕ್ಸ್ ಸೋಂಕಿತರ ಪ್ರತ್ಯೇಕವಾಸಕ್ಕಾಗಿ ಆರಂಭಿಸಲಾದ ವಿಶೇಷ ವಾರ್ಡ್‍ಗೆ ದಾಖಲಿಸಬೇಕು’ ಎಂದು ಸೂಚಿಸಿದರು.