Connect with us

DAKSHINA KANNADA

ಆಸ್ತಿ ಮುಂದೆ ಮರೆಯಾಯ್ತು ಮಾನವೀಯತೆ…..ಪುತ್ತೂರಿನ ಬಡ ಕುಟುಂಬ ಇದೀಗ ಬೀದಿಪಾಲು….!!

ಪುತ್ತೂರು : ಹಣ-ಆಸ್ತಿ ಇವುಗಳ ಮುಂದೆ ಮಾನವೀಯತೆ,ಸಂಬಂಧಗಳು ಯಾವ ರೀತಿ ಮುದುಡಿ ಹೋಗುತ್ತದೆ ಎನ್ನುವುದಕ್ಕೊಂದು ಜ್ವಲಂತ ಉದಾಹರಣೆ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ. ಪುತ್ತೂರು ನಗರದ ಹೊರವಲಯದ ಕಬಕ ಗ್ರಾಮಪಂಚಾಯತ್ ವ್ಯಾಪ್ತಿಯ ನೆಕ್ಕರಾಜೆ ಬೈಪದವು ಎಂಬಲ್ಲಿನ ರುಕ್ಮ-ಶಾಂತಿ ಎಂಬ ದಂಪತಿಗಳ ಬದುಕು ಅಮಾನವೀಯತೆಯನ್ನು ಎತ್ತಿ ತೋರಿಸುವಂತಿದೆ.

 

ಹಿರಿಯರಿಂದ ಬಳುವಳಿಯಾಗಿ ಬಂದ ಭೂಮಿಯನ್ನು ರುಕ್ಮ ಹಾಗೂ ಆತನ ಅಣ್ಣನಿಗೆ ಪಾಲು ಮಾಡಲಾಗಿತ್ತು. ಆದರೆ ತಮ್ಮನಿಗೆ ಅಣ್ಣನ ಜಾಗದಲ್ಲಿ ಇರುವ ಮುರುಕಲು ಮನೆಗೆ ಇಳಿಸಿದ ಜೋಪಡಿ ಮಾತ್ರ. ಸರಿಯಾಗಿ ಕಾಲು ಚಾಚಿ ಮಲಗಲು ಸಾಧ್ಯವಿಲ್ಲದ ಕೋಳಿಗೂಡು. ಮಳೆಯ ದೆಸೆಯಿಂದ ತಪ್ಪಿಸಿಕೊಳ್ಳಲು ಸೋಗೆ ಮತ್ತು ಪ್ಲಾಸ್ಟಿಕ್ ಹಾಕಿದ ಈ ಜೋಪಡಿಯ ಮೇಲ್ಛಾವಣಿ ಗಾಳಿ ಬಂದರೆ ಹಾರಿ ಹೋಗುವ ಸ್ಥಿತಿಯಲ್ಲಿದೆ. ಈ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಈ ಕುಟುಂಬ ಬದುಕುತ್ತಿದೆ.ಆದರೆ ಇದೀಗ ಅಣ್ಣ ಆ ಮನೆಯಿಂದಲೂ ಹೊರ ಹೋಗುವಂತೆ ಒತ್ತಾಯಿಸುತ್ತಿದ್ದಾರೆ. ಮುರುಕಲು ಮನೆಯಿಂದ ಹೊರ ಹೋದಲ್ಲಿ ಈ ಕುಟುಂಬ ಬೀದಿಪಾಲಾಗಿದೆ. ಕನಿಷ್ಟ ಮನೆಗಾದರೂ ಸ್ವಲ್ಪ ಜಾಗಕೊಡಿ ಎಂದರೆ ಅಣ್ಣನ ಕುಟುಂಬ ಅದಕ್ಕೆ ತಯಾರಾಗಿಲ್ಲ. ಈ ಕಾರಣದಿಂದ ಮನೆಯನ್ನು ಕಳೆದುಕೊಂಡಿರುವ ರುಕ್ಮ ಇದೀಗ ಬದುಕನ್ನೂ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ದಂಪತಿಗಳಿಗೆ ಮೂರೂವರೆ ವರ್ಷದ ಮಗಳಿದ್ದು, ವರ್ಷದ ಮಗುವಿಗೆ ಇದ್ದಕ್ಕಿದ್ದಂತೆ ಜ್ವರ ಬಂದ ಬಳಿಕ ಆಕೆಗೆ ಎರಡೂ ಕಾಲುಗಳಲ್ಲಿ ಶಕ್ತಿ ಇಲ್ಲದಂತಾಗಿತ್ತು. ಆಟವಾಡಿಕೊಂಡು ಇರಬೇಕಾದ ಪುಟಾಣಿಗೆ ಈಗ ನಡೆದಾಡಲೂ ಸಾಧ್ಯವಿಲ್ಲ. ಈಕೆಗೆ ಮದ್ದು ಮಾಡಲು ಈ ಕುಟುಂಬದಲ್ಲಿ ದುಡ್ಡಿಲ್ಲ. ರುಕ್ಮ ಕೂಲಿನಾಲಿ ಮಾಡಿ ಸಿಗುವ ಹಣ ಊಟಕ್ಕೂ ಸಾಕಾಗುವುದಿಲ್ಲ. ಅತ್ತ ಮನೆಯಿಲ್ಲ. ಇತ್ತ ಮಗಳ ಆರೋಗ್ಯ ಸರಿಯಿಲ್ಲ. ಹೆಂಡತಿ ಕೆಲಸಕ್ಕೆ ಹೋಗಲು ಸಾಧ್ಯವೇ ಇಲ್ಲ. ಕಾರಣ ಈ ಮಗುವನ್ನು ನೋಡಿಕೊಳ್ಳಬೇಕು. ಅರ್ಜಿ ಸಲ್ಲಿಸಿದ್ದರೂ ಈ ಮಗುವಿಗೆ ಸಿಗಬೇಕಾದ ಆರ್ಥಿಕ ಸೌಲಭ್ಯವೂ ಸಿಕ್ಕಿಲ್ಲ. ಇಂತಹ ಸ್ಥಿತಿಯಲ್ಲಿ ಬದುಕುವುದು ಹೇಗೆ ಎಂಬ ಪ್ರಶ್ನೆ ಈ ಕುಟುಂಬದ ಮುಂದೆ ಬೃಹದಾಕಾರವಾಗಿ ನಿಂತಿದೆ. ಕೋಳಿಗೂಡಿನ ಮನೆಯಲ್ಲಿರುವ ಈ ಕುಟುಂಬಕ್ಕೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಶೌಚಾಲಯವಿಲ್ಲ. ಕುಡಿಯುವ ನೀರಿಲ್ಲ. ವಿದ್ಯುತ್ ವ್ಯವಸ್ಥೆಯ ನೀಡುವ ಸ್ಥಿತಿ ಮೊದಲೇ ಇಲ್ಲ. ಎಲ್ಲದಕ್ಕಿಂತ ಮೊದಲು ಸೂರೇ ಇಲ್ಲ.

ಈ ಕುಟುಂಬದ ಪರಿಸ್ಥಿತಿ ಸ್ಥಳೀಯ ಕಬಕ ಗ್ರಾಪಂ ವ್ಯವಸ್ಥೆಗೂ ಅರಿವಾಗಿದೆ. ಹೇಗಾದರೂ ಮಾಡಿ ಈ ಕುಟುಂಬಕ್ಕೊಂದು ಸೂರು ನೀಡಬೇಕು ಎನ್ನುವ ಪ್ರಯತ್ನ ನಡೆಸಿದ್ದರೂ, ಮನೆ ನೀಡಲು ಬೇಕಾದ ದಾಖಲೆಗಳು ಈ ಸದ್ಯ ಈ ಕುಟುಂಬದಲ್ಲಿಲ್ಲ. ಆದರೂ ಬಡ‌ಕುಟುಂಬದ ಪಕ್ಕದಲ್ಲಿರುವ ಡೀಸಿ ಮನ್ನಾ ಭೂಮಿಯಲ್ಲಿ ಈ ಕುಟುಂಬಕ್ಕೆ 5 ಸೆಂಟ್ಸ್ ನೀಡಿ ಮನೆ ನೀಡಲು ಗ್ರಾಪಂ ಮುಂದಾಗಿದೆ. ಆದರೆ ಸ್ಥಳೀಯ ವ್ಯಕ್ತಿಯೊಬ್ಬರು ಈ ಭೂಮಿಗೆ ಹೋಗುವ ದಾರಿಯನ್ನೇ ಬೇಲಿ ಹಾಕಿ ತಡೆ ಒಡ್ಡಿದ್ದಾರೆ. ಈ ಕುಟುಂಬಕ್ಕೆ ಮನೆ ನೀಡಲು ಗ್ರಾಪಂ ಈಗಾಗಲೇ ರೂ.1.40 ಲಕ್ಷ ಅನುದಾನ ಮಂಜೂರು ಮಾಡಿದ್ದರೂ ಈ ತನಕ‌ ಜಾಗವೇ ಸಿಕ್ಕಿಲ್ಲ. ಈ ನಡುವೆ ಕೆಲವು ಸಂಘಟನೆಗಳು ರುಕ್ಮ ಅವರ ಅಣ್ಣ‌ನ 3 ಎಕ್ರೆಯಲ್ಲಿ 5 ಸೆಂಟ್ಸ್ ಸ್ಥಳವನ್ನು ದಾನಪತ್ರದ ಮೂಲಕ ಪಡೆಯಲು ಪ್ರಯತ್ನ ನಡೆಸಲಾಗಿತ್ತು. ಆದರೆ ಇದಕ್ಕೂ ಸ್ಪಂಧನೆ ದೊರಕಿಲ್ಲ. ಈ ಹಿನ್ನಲೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಅವರಿಗೆ ನಿವೇಶನಕ್ಕಾಗಿ ಮನವಿ ಮಾಡಲಾಗಿದೆ.

ಈ ಕುಟುಂಬದ ಪರಿಸ್ಥಿತಿ ನೋಡುತ್ತಿದ್ದರೆ ನೋವಾಗುತ್ತಿದೆ. ಇವರಿಗೆ ಕನಿಷ್ಟ ಮೂರು ಲಕ್ಷದ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಚಿಂತನೆ ನಮ್ಮದಾಗಿದೆ. ಇದರಲ್ಲಿ ರೂ.1.40 ಲಕ್ಷ ವಿಕಲಚೇತನ ನಿಧಿಯಿಂದ ಮಂಜೂರು ಮಾಡಲಾಗಿದೆ. ಉಳಿದ ಹಣವನ್ನು ದಾನಿಗಳ ಮೂಲಕ ಸಂಗ್ರಹಿಸಿ ಬಡ ಕುಟುಂಬಕ್ಕೆ ಸೂರು ನೀಡಲು ಸ್ಥಳೀಯ ಗ್ರಾಮಪಂಚಾಯತ್ ಯೋಜನೆ ಹಾಕಿಕೊಂಡಿದೆ.

 

Facebook Comments

comments

Advertisement Advertisement
Click to comment

You must be logged in to post a comment Login

Leave a Reply