LATEST NEWS
ಈ ನಿಮ್ಮ ಪ್ರೀತಿಯನ್ನು ಬಡ್ಡಿ ಸಮೇತ ಹಿಂದಿರುಗಿಸುತ್ತೇನೆ- ಪ್ರಧಾನಿ ನರೇಂದ್ರ ಮೋದಿ

ಈ ನಿಮ್ಮ ಪ್ರೀತಿಯನ್ನು ಬಡ್ಡಿ ಸಮೇತ ಹಿಂದಿರುಗಿಸುತ್ತೇನೆ- ಪ್ರಧಾನಿ ನರೇಂದ್ರ ಮೋದಿ
ಮಂಗಳೂರು ಮೇ 05: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಮಂಗಳೂರಿಲ್ಲಿ ಇಂದು ಬಿಜೆಪಿ ಬೃಹತ್ ಚುನಾವಣಾ ಪ್ರಚಾರ ಸಭೆ ನಡೆಯಿತು. ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೇಸ್ ಪಕ್ಷ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದು ಮತದಾರರನ್ನು ದಾರಿ ತಪ್ಪಿಸುತ್ತಿದ್ದು, ಕಾಂಗ್ರೇಸ್ಸಿಗರಿಗೆ ಸೋಲಿನ ಭೀತಿ ಆವರಿಸಿದೆ ಎಂದು ಹೇಳಿದರು.
ಮಂಗಳೂರಿನ ಕೇಂದ್ರ ಮೈದಾನದಲ್ಲಿ ನೆರೆದ ಜನಸಾಗರ ಕಂಡು ಭಾವುಕರಾದ ಮೋದಿ “ಈ ನಿಮ್ಮ ಪ್ರೀತಿಯನ್ನು ಬಡ್ಡಿ ಸಮೇತ ಹಿಂದಿರುಗಿಸುತ್ತೇನೆ ಎಂದು ಹೇಳಿದರು. ಮಂಗಳೂರಿಗೆ ಅಭಿವೃದ್ದಿ ಎಂಬ ಕೊಡುಗೆ ನೀಡಿ ನಿಮ್ಮ ಪ್ರೀತಿಗೆ ಅರ್ಥ ನೀಡುತ್ತೇನೆ ಎಂದು ಹೇಳಿದ ಅವರು ಈ ಹಿಂದೆ ಲಕ್ಷದ್ವೀಪಕ್ಕೆ ತೆರಳುವ ಸಂದರ್ಭದಲ್ಲಿ ರಾತ್ರಿ ಒಂದು ಗಂಟೆಗೆ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದ್ದೀರಿ. ಅದನ್ನು ಎಂದೂ ಮರೆಯಲಾರೆ. ಇಲ್ಲಿಯ ಸಜ್ಜಿಗೆ ಬಜಿಲ್, ನೀರು ದೋಸೆ, ಮೂಡೆಯ ರುಚಿ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಒಂದರ ಹಿಂದೆ ಒಂದು ಸೋಲು ಕಾಣುತ್ತಿದೆ. ದೇಶದ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಧೂಳೀಪಟವಾಗಿದೆ. ಈಗ ಕರ್ನಾಟಕದ ಸರದಿ, ಇಲ್ಲೂ ಕಾಂಗ್ರೆಸ್ ದಯನೀಯ ವೈಫಲ್ಯ ಕಾಣಲಿದೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ಸಿಗರಿಗೆ ಸಂಶಯ ಪಿಶಾಚಿ ಬಂದಿದೆ ಎಂದು ಹೇಳಿದ ಅವರು ದೇಶದ ಸೇನೆ ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಸೇನೆ ಮೇಲೆ ಸಂಶಯ ವ್ಯಕ್ತಪಡಿಸುತ್ತಾರೆ. ನೋಟ್ ಬ್ಯಾನ್ ವೇಳೆ ರಿಸರ್ವ್ ಬ್ಯಾಂಕ್ ಮೇಲೆ ಸಂಶಯ ವ್ಯಕ್ತಪಡಿಸುತ್ತಾರೆ . ಚುನಾವಣೆಯಲ್ಲಿ ಸೋತಾಗ ಇವಿಎಂ, ಚುನಾವಣಾ ಆಯೋಗದ ಮೇಲೂ ಸಂಶಯ ವ್ಯಕ್ತಪಡಿಸುತ್ತಾರೆ ಎಂದು ಅವರು ಲೇವಡಿ ಮಾಡಿದರು.
ಸ್ವಚ್ಛ ಭಾರತ್ ಅಭಿಯಾನ , ಶೌಚಾಲಯ ನಿರ್ಮಾಣ ಅಭಿಯಾನ ದ ಕುರಿತು ಈ ಕಾಂಗ್ರೆಸ್ಸಿಗರು ನನಗೆ ತಮಾಷೆ ಮಾಡಿದರು. ಅವರಿಗೆ ನಾನು ಏನು ಮಾಡಿದರೂ ಆಗಲ್ಲ. ಯೋಗ ಮಾಡಿದರೂ ಅವರಿಗೆ ಕಷ್ಟವಾಗಿದೆ. ನೋಟ್ ಬಂದಿ ಇಫೆಕ್ಟ್ ನಿಂದ ಕಾಂಗ್ರೆಸ್ ನಾಯಕರ ಇನ್ನು ಹೊರಗೆ ಬಂದಿಲ್ಲ. ಇನ್ನೂ ಅವರ ನೋಟುಗಳು ಹೊರಗೆ ಬರುತ್ತಿದೆ ಎಂದು ಮೋದಿ ವ್ಯಂಗ್ಯ ವಾಡಿದರು.