LATEST NEWS
ಚೀನಾ ಗಲಾಟೆ ನಡುವೆ ಮಹತ್ವ ಪಡೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಭಾಷಣ
ನವದೆಹಲಿ: ಮಂಗಳವಾರ ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕುರಿತು ಪ್ರಧಾನಿ ಮಂತ್ರಿಗಳ ಕಚೇರಿ ಟ್ವೀಟ್ ಮೂಲಕ ಖಚಿತಪಡಿಸಿದೆ.
ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಜೂನ್ 15 ರಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ಕಹಿ ಘಟನೆ ಮತ್ತು ಜುಲೈ 1ರಿಂದ ದೇಶ ಅನ್‌ಲಾಕ್ 2.0ಗೆ ಹೆಜ್ಜೆ ಇಟ್ಟಿರುವ ನಡುವೆಯೇ ನಿಗದಿಯಾಗಿರುವ ಈ ಭಾಷಣ ಸಹಜವಾಗಿಯೇ ಪ್ರಾಮುಖ್ಯತೆ ಗಳಿಸಿದೆ.
ಇಂದು ಅನ್‍ಲಾಕ್-1 ಅಂತ್ಯವಾಗಲಿದ್ದು, ಬುಧವಾರ ಅನ್‍ಲಾಕ್-2 ಆರಂಭವಾಗಲಿದೆ. ಈಗಾಗಲೇ ಆನ್‍ಲಾಕ್-2 ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಪ್ರಧಾನಿಗಳು ನಾಳೆಯೇ ಭಾಷಣದಲ್ಲಿ ಅನ್‍ಲಾಕ್-2 ಮತ್ತು ಕೊರೊನಾ ಪರಿಸ್ಥಿತಿಯ ಬಗ್ಗೆ ಮಾತನಾಡುವ ಸಾಧ್ಯತೆಗಳಿವೆ.
ಈಗಾಗಲೇ ದೇಶದ ಎಲ್ಲ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿರುವ ಪ್ರಧಾನಿಗಳು ರಾಜ್ಯಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಹಾಗಾಗಿ ಇಂದಿನ ಭಾಷಣ ಕುತೂಹಲ ಹೆಚ್ಚಿಸಿದೆ.