LATEST NEWS
ನೀಟ್ ಪರೀಕ್ಷೆ ದಿನವೇ ಪ್ರಧಾನಿ ರೋಡ್ ಶೋ..ಆತಂಕದಲ್ಲಿ ವಿಧ್ಯಾರ್ಥಿಗಳು…!!

ಬೆಂಗಳೂರು ಮೇ 05 :ವೈದ್ಯಕೀಯ ಕೋರ್ಸ್ ಕಲಿಯಲು ಪ್ರಮುಖ ಪರೀಕ್ಷೆಯಾಗಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಇದೇ 7ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಬೆಂಗಳೂರಿನಲ್ಲಿ ನಡೆಯಲಿರುವ ಹಿನ್ನಲೆ ಇದೀಗ ವಿಧ್ಯಾರ್ಥಿಗಳಿಗೆ ಆತಂಕ ಶುರುವಾಗಿದೆ.
ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕನಿಷ್ಠ ಎರಡು ತಾಸು ಮೊದಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ರೋಡ್ ಶೋ ನಡೆಸಲಿದ್ದಾರೆ. ಈಗ ನಿಗದಿಯಾಗಿರುವಂತೆ, ಬ್ರಿಗೇಡ್ ರಸ್ತೆಯ ಯುದ್ಧ ಸ್ಮಾರಕದ (ಒಪೆರಾ ಹೌಸ್ ವೃತ್ತ) ಬಳಿಯಿಂದ ಅವರ ರೋಡ್ ಶೋ ಶುರುವಾಗಲಿದೆ. ಅದು ಮಲ್ಲೇಶ್ವರದ ಸರ್ಕಲ್ ಮಾರಮ್ಮ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ. ಮೋದಿಯವರ ರೋಡ್ ಶೋ ಯಾವ್ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಲಿದೆ ಎಂಬ ನಿಖರ ಮಾಹಿತಿಯನ್ನು ಪ್ರಧಾನಿ ಕಾರ್ಯಾಲಯ ಇನ್ನೂ ಬಿಡುಗಡೆ ಮಾಡಿಲ್ಲ.

10 ಗಂಟೆಗೆ ರೋಡ್ ಶೋ ಆರಂಭವಾದರೆ ಅದು ಸಾಗುವ ಮಾರ್ಗವನ್ನು ಕನಿಷ್ಠ ಎರಡು ಗಂಟೆ ಮೊದಲೇ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ತನ್ನ ಕಣ್ಗಾವಲಿನಲ್ಲಿ ಇಡುತ್ತದೆ. ರೋಡ್ ಶೋಗೆ ಯಾವುದೇ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ, ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗುತ್ತದೆ. ರೋಡ್ ಶೋ ಸಾಗುವ ಮುಖ್ಯಮಾರ್ಗಕ್ಕೆ ಸಂಪರ್ಕಿಸುವ ಎಲ್ಲ ಉಪ ಹಾಗೂ ಕಿರು ಮಾರ್ಗಗಳಲ್ಲಿ ಬ್ಯಾರಿಕೇಡ್ ಹಾಕಿ, ನಿರ್ಬಂಧ ವಿಧಿಸಲಾಗುತ್ತದೆ. ಇದು ನೀಟ್ ಪರೀಕ್ಷೆ ಬರೆಯುವ ವಿಧ್ಯಾರ್ಥಿಗಳಿಗೆ ಸಂಕಷ್ಟವಾಗುತ್ತದೆ. 3 ರಿಂದ 4 ಗಂಟೆಗಳ ಮೊದಲೇ ರಸ್ತೆಗಳು ಬಂದ್ ಆಗಲಿದ್ದು, ಈ ಹಿನ್ನಲೆ ಪರೀಕ್ಷೆ ಬರೆಯುವ ಮಕ್ಕಳು ಎಲ್ಲಾ ಅಡೆತಡೆಗಳನ್ನು ದಾಟಿ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ತಲುಪಲು ಕಷ್ಟಪಡಬೇಕಾಗಿದೆ.