National
ಲಡಾಖ್ ನಲ್ಲಿ ಮೋದಿ ಘರ್ಜನೆ… ಶಾಂತಿ ಹಾಳು ಮಾಡಲು ಪ್ರಯತ್ನಿಸಿದರೆ ತಕ್ಕ ಉತ್ತರ

ಲಡಾಖ್: ಚೀನಾ ಸಂಘರ್ಷದ ನಂತರ ಮೊದಲ ಬಾರಿಗೆ ಲಡಾಖ್ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಸೈನಿಕರನ್ನು ಉದ್ದೇಶಿಸಿ ಇಂದು ಮಾತನಾಡಿದ್ದು, ಭಾರತದ ತಂಟೆಗೆ ಬಂದವರಿಗೆ ದೊಡ್ಡ ಸಂದೇಶವನ್ನು ರವಾನಿಸಿದ್ದಿರಾ. ತಂಟೆಕಾರರಿಗೆ ಸೂಕ್ತ ಪ್ರತ್ಯುತ್ತರ ನೀಡಿದ್ದೀರಿ. ಈಗ ಭಾರತದ ಶಕ್ತಿ ಇಡೀ ವಿಶ್ವಕ್ಕೆ ಅರ್ಥವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗಲ್ವಾನ್ ಘರ್ಷಣೆಯ ಬಳಿಕ ನಿಮು ಸೇನಾ ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಗಲ್ವಾನ್ ಕಣಿಯಲ್ಲಿ ಹುತಾತ್ಮರಾದ ಸೈನಿಕರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಇದು ದೇಶಕ್ಕೆ ಸರ್ವಸ್ವ ತ್ಯಾಗ ಮಾಡುವ ರಾಷ್ಟ್ರ ಭಕ್ತರ ಭೂಮಿ. ವೀರತ್ವ ನಮ್ಮ ಭೂಮಿಯಲ್ಲಿದೆ. ಆ ವೀರತನ ನಿಮ್ಮ ಮುಖಗಳಲ್ಲಿ ಕಾಣಿಸುತ್ತಿದೆ. ದೇಶದ ಪ್ರತಿ ಮೂಲೆಯಿಂದ ಬಂದ ಸೈನಿಕರು ತಮ್ಮ ಪರಾಕ್ರಮ ತೋರಿಸಿದ್ದಾರೆ. ಅವರ ಪರಾಕ್ರಮಕ್ಕೆ ಇಡೀ ದೇಶ ಗೌರವಿಸುತ್ತಿದೆ. ನಿಮ್ಮ ವೀರತ್ವ ಮತ್ತು ಪರಾಕ್ರಮದಿಂದ ನಾವು ಎದೆಯುಬ್ಬಿಸಿ ನಿಲ್ಲುವಂತಾಗಿದೆ ಎಂದು ಸೈನಿಕರ ಪರಾಕ್ರಮವನ್ನು ಕೊಂಡಾಡಿದರು.

ಭಾರತ ಶಾಂತಿ ಮತ್ತು ಸ್ನೇಹವನ್ನು ಬಯಸುತ್ತದೆ. ಶಾಂತಿ ಎನ್ನುವುದು ಬಲಹೀನತೆ ಅಲ್ಲ. ಶಾಂತವಾಗಿರುವುದು ಒಂದು ಶಕ್ತಿ. ಭಾರತೀಯ ಸೇನೆಗೆ ನಾವು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದ್ದೇವೆ. ವೇಗವಾಗಿ ಸೇನೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಶಾಂತಿ ಹಾಳು ಮಾಡುವ ಪ್ರಯತ್ನವನ್ನು ಯಾರೇ ಮಾಡಿದರೂ ಸೂಕ್ತ ಉತ್ತರ ನೀಡಲು ಸಿದ್ದ ಎನ್ನುವುದೇ ಇದರ ಅರ್ಥ ಎಂದು ಚೀನಾದ ಹೆಸರನ್ನು ಉಲ್ಲೇಖಿಸದೇ ಮಾತಿನಲ್ಲೇ ಮೋದಿ ತಿರುಗೇಟು ನೀಡಿದರು.
ರಾಷ್ಟ್ರದ ರಕ್ಷಣೆ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಇಬ್ಬರು ತಾಯಂದಿರನ್ನು ನೆನೆಯುತ್ತೇನೆ. ಭಾರತ ಮಾತೆಯ ಜೊತೆಗೆ ವೀರ ಸೈನಿಕರಿಗೆ ಜನ್ಮ ನೀಡಿದ ಸೈನಿಕರ ತಾಯಂದಿರ ಬಗ್ಗೆ ನೆನೆಯುತ್ತೇನೆ. ಹೆಗಲಿಗೆ ಹೆಗಲು ಕೊಟ್ಟು ಭಾರತ ಮಾತೆ ರಕ್ಷಣೆ ಮಾಡುತ್ತಿದ್ದೀರಿ ಎಂದು ಹೇಳುವ ಮೂಲಕ ಮೋದಿ ಸೈನಿಕರ ಗುಣಗಾನ ಮಾಡಿದರು.