Connect with us

LATEST NEWS

ಕರಾವಳಿ ಜನರ ನಿದ್ದೆಗೆಡಿಸಿದ ಚುನಾವಣಾ ನೀತಿ ಸಂಹಿತೆ

ಕರಾವಳಿ ಜನರ ನಿದ್ದೆಗೆಡಿಸಿದ ಚುನಾವಣಾ ನೀತಿ ಸಂಹಿತೆ

ಮಂಗಳೂರು ಎಪ್ರಿಲ್ 9: ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ರಾಜಕಾರಣಿಗಳ ಬೆನ್ನು ಹತ್ತುವ ಬದಲು ಜನ ಸಾಮಾನ್ಯರ ಧಾರ್ಮಿಕ ಭಾವನೆಗಳ ಜೊತೆ ಆಟಕ್ಕೆ ಮುಂದಾಗಿದ್ದಾರೆ. ಚುನಾವಣೆಯ ನೀತಿ ಸಂಹಿತೆಯನ್ನು ರಾಜಕಾರಣಿಗಳಿಗೆ ಹೇರುವ ಬದಲು ಜಿಲ್ಲೆಯ ಜನಸಾಮಾನ್ಯನ ಮೇಲೆ ಹೇರಲು ಜಿಲ್ಲೆಯ ಚುನಾವಣಾ ಆಯೋಗ ಮುಂದಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಜನಸಾಮಾನ್ಯರ ನಿದ್ದೆಯನ್ನೆ ಕೆಡಿಸಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಅತಿ ಹೆಚ್ಚು ನಡೆಯುವುದರಿಂದ ಜನಸಾಮಾನ್ಯರಿಗೆ ಅಧಿಕಾರಿಗಳ ಚುನಾವಣಾ ನೀತಿ ಸಂಹಿತೆ ಸಮಸ್ಯೆಯನ್ನು ತಂದೊಡ್ಡಿದೆ. ಮನೆಯಲ್ಲಿ ಮಗನ ಉಪನಯನಕ್ಕೆ ತಂದ ಸೀರೆಯನ್ನು ಸೀಝ್ ಮಾಡೋದು, ವರ್ಷದ ಹಿಂದೆ ನಿರ್ಧರಿತವಾದ ಯಕ್ಷಗಾನ ಬಯಲಾಟ ನಿಲ್ಲಿಸೋದು, ಪ್ರತಿವರ್ಷ ನಡೆಸುವ ಮನೆ ದೈವಗಳ ನೇಮ, ಕೋಲಕ್ಕೆ ತಡೆ ಒಡ್ಡುವುದು, ದೈವಸ್ಥಾನದ ಉತ್ಸವಗಳನ್ನು ರಾತ್ರಿ ಹೊತ್ತು ಮಾಡದೆ ಹಗಲಲ್ಲಿಯೇ ಮಾಡಿ ಎಂದು ಸೂಚಿಸುವುದು. “ಇವನರ್ವ” ಎಂದು ಡೈಲಾಗ್ ಹೇಳಿದ ಯಕ್ಷಗಾನ ಕಲಾವಿದನಿಗೆ ನಿಷೇಧ ಹೇರೋದು.. ಒಂದೇ ಎರಡೇ.. ಹೀಗೆ ಕರಾವಳಿಯಲ್ಲಿ ಚುನಾವಣೆ ಆಯೋಗದ ಅಧಿಕಾರಿಗಳು ರಾಜಕಾರಣಿಗಳ ಬೆನ್ನು ಹತ್ತುವ ಬದಲು ಜನ ಸಾಮಾನ್ಯರ, ಧಾರ್ಮಿಕ ಭಾವನೆಗಳ ಜತೆ ಆಟಕ್ಕೆ ಮುಂದಾಗಿದ್ದಾರೆ.

ನೀತಿ ಸಂಹಿತೆಯ ತುರ್ತು ಪರಿಸ್ಥಿತಿ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆಯ ತುರ್ತು ಪರಿಸ್ಥಿತ ಹೇರಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇತ್ತೀಚೆಗೆ ಸುದ್ದಿಯಾದ ಆಕಾಶವಾಣಿಯಲ್ಲಿ ಕಮಲ, ಕೈ, ಇತ್ಯಾದಿ ಪದಗಳಿದ್ದ ಹಾಡುಗಳನ್ನು ಹಾಡಬಾರದು ಎಂದು ಕೇಂದ್ರ ಕಚೇರಿಯಿಂದ ಮಂಗಳೂರು ಆಕಾಶವಾಣಿ ಕಚೇರಿಗೆ ಸೂಚನೆ, ಜನಸಾಮಾನ್ಯರಲ್ಲಿ ವಿಧಾನಸಭೆ ಚುನಾವಣೆ ಬಗ್ಗೆ ಆಕ್ರೋಶ ಹುಟ್ಟುವಂತೆ ಮಾಡಿದೆ.
ಖಾಸಗಿ ಕಾರ್ಯಕ್ರಮಗಳ ಅನುಮತಿ ಕುರಿತಾಗಿ ಜಿಲ್ಲಾಧಿಕಾರಿಗಳು ಪ್ರತಿದಿನ ಒಂದೊಂದು ಆದೇಶ ನೀಡುತ್ತಿರುವುದು ಜನರಲ್ಲಿ ಗೊಂದಲ ಮೂಡಿದೆ. ಹರಕೆಯ ಯಕ್ಷಗಾನಗಳು ಹಲವು ವರ್ಷಗಳ ಕಾಯುವಿಕೆಯ ಬಳಿಕ ಸಿಗುವ ಅವಕಾಶವನ್ನು ಚುನಾವಣಾ ಆಯೋಗ ಜನರಿಂದ ಕಸಿದುಕೊಳ್ಳುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಂಗ್ರೇಸ್ ಮುಖಂಡ ಐವನ್ ಡಿಸೋಜಾ ಜಿಲ್ಲೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರನ್ನು ಕೂಡ ನೀಡಿದ್ದರು. ಜಿಲ್ಲೆಯಲ್ಲಿ ನೀತಿ ಸಂಹಿತೆ ಹೆಸರಿನಲ್ಲಿ ತುರ್ತು ಪರಿಸ್ಥಿತಿ ಹೇರಲು ಚುನಾವಣಾ ಆಯೋಗದ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ನೈತಿಕ ಮತದಾನದ ಧ್ಯೇಯದೊಂದಿಗೆ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ನಡೆಸಲು ಹೊರಟಿರುವ ರಾಜ್ಯ ಚುನಾವಣಾ ಆಯೋಗ ನೀತಿ ಸಂಹಿತೆಯ ಹೆಸರಿನಲ್ಲಿ ಕರಾವಳಿ ಜಿಲ್ಲೆಗಳಲ್ಲಿ ತುರ್ತು ಪರಿಸ್ಥಿತಿಯನ್ನು ಉಂಟುಮಾಡಿದೆ ಎಂಬ ಆಕ್ರೋಶ ಸಾರ್ವಜನಿಕವಲಯದಿಂದ ಕೇಳಿ ಬರುತ್ತಿದೆ. ಅಲ್ಲದೆ ಈ ಪರಿಸ್ಥಿತಿ ಚುನಾವಣೆಯ ಮತದಾನದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳು ಇದ್ದು, ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕಾಗ ಅಗತ್ಯ ಇದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *