Connect with us

    KARNATAKA

    ಶಾಸಕರೇ ಬಾಯ್ಮುಚ್ಕೊಂಡ್ ಇರಿ: ಡಿಕೆಶಿ ಎಚ್ಚರಿಕೆ

    ಬೆಂಗಳೂರು: ‘ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆ ವಿಚಾರದಲ್ಲಿ ಶಾಸಕರು ಮರ್ಯಾದೆಯಿಂದ ಬಾಯ್ಮುಚ್ಕೊಂಡು ಕುಳಿತುಕೊಂಡರೆ ಬಹಳ ಒಳ್ಳೆಯದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದರು.

    ‘ತಮ್ಮ ಕ್ಷೇತ್ರದಲ್ಲಿ ಮುನ್ನಡೆ ಕೊಡಿಸದ ಸಚಿವರಿಂದ ರಾಜೀನಾಮೆ ಪಡೆಯಲಿ’ ಎಂಬ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ನೀಡಿರುವ ಹೇಳಿಕೆಯ ಬಗ್ಗೆ ಸುದ್ದಿಗಾರರು ಪ್ರಸ್ತಾಪಿಸಿದಾಗ ಸಿಡಿಮಿಡಿಗೊಂಡ ಶಿವಕುಮಾರ್, ‘ಅನಗತ್ಯವಾಗಿ ಬಹಿರಂಗ ಹೇಳಿಕೆಗಳನ್ನು ನೀಡಬಾರದು’ ಎಂದು ಸೂಚನೆ ನೀಡಿದರು.

    ‘ಸೋಲಿಗೆ ಕೆಲವು ಶಾಸಕರು ಕಾರಣವೆಂದು ಸಚಿವರು ದೂರು ನೀಡಿದ್ದಾರೆಯೇ’ ಎಂದು ಪ್ರಶ್ನಿಸಿದಾಗ, ‘ನನ್ನ ಬಳಿ ಬಂದು ಯಾರೊಬ್ಬರೂ ದೂರು ನೀಡಿಲ್ಲ. ಯಾರ ಮೇಲೆ ದೂರು ನೀಡಿದರೂ ಸುಖವಿಲ್ಲ, ಪ್ರಯೋಜನವೂ ಇಲ್ಲ. ಕ್ಷೇತ್ರಗಳ ಜವಾಬ್ದಾರಿ ತೆಗೆದುಕೊಂಡವರು ಕಾರ್ಯಕರ್ತರ ಬಳಿ ಮಾತನಾಡಿ, ಎಲ್ಲಿ ತಪ್ಪಾಗಿದೆ ಎಂದು ಪರಿಶೀಲಿಸಿ, ಪರಿಹಾರ ಸಮೇತ‌ ಉತ್ತರ ಕೊಡಬೇಕು. ಅಷ್ಟೇ’ ಎಂದರು.

    ‘ಪ್ರಮುಖ ನಾಯಕರ ಕ್ಷೇತ್ರಗಳಲ್ಲಿ ನಿರೀಕ್ಷೆಯಂತೆ ಮತ ಗಳಿಸಲು ಸಾಧ್ಯವಾಗಿಲ್ಲ. ನನ್ನ ಕ್ಷೇತ್ರದ ಅನೇಕ ನಾಯಕರ ಊರಿನಲ್ಲಿಯೇ ನಿರೀಕ್ಷಿತ ಮಟ್ಟಕ್ಕೆ ಮತಗಳು ಬಂದಿಲ್ಲ. ಇದಕ್ಕೆ ಏನಾದರೂ ಒಂದು ಸಬೂಬು ಹೇಳಿದರೆ ಯಾರು ಕೇಳುವುದಿಲ್ಲ. ಆದ ಕಾರಣ ಪರಿಶೀಲನೆ ನಡೆಸುತ್ತೇವೆ’ ಎಂದರು.

    ‘ಲೋಕಸಭೆ ಚುನಾವಣೆಯಲ್ಲಿ ಜನರ ತೀರ್ಪು ನಮಗೆ ಎಚ್ಚರಿಕೆ ಗಂಟೆ. ನಮ್ಮಿಂದ ಎಲ್ಲಿ ತಪ್ಪಾಗಿದೆ ಎಂದು ಪರಾಮರ್ಶೆ ನಡೆಸಿ ಅದನ್ನು ಸರಿಪಡಿಸಿಕೊಳ್ಳಬೇಕಿದೆ. ಚುನಾವಣಾ ಫಲಿತಾಂಶದ ಕುರಿತು ಮುಂದಿನ ದಿನಗಳಲ್ಲಿ ಎಲ್ಲ ನಾಯಕರ ಜೊತೆ ಪರಾಮರ್ಶೆ ಸಭೆ ನಡೆಸಲಾಗುವುದು. ಸೋಲು ಸೋಲೇ. ಎಲ್ಲಿ ತಪ್ಪಾಗಿದೆ, ಫಲಿತಾಂಶದಲ್ಲಿ ಏಕೆ ಹೆಚ್ಚು ಕಮ್ಮಿಯಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದರು.

    ‘ಮುಂದಿನ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳ ನಾಯಕರ ಜೊತೆ ಸಭೆ ನಡೆಸಲಾಗುವುದು. ಶೀಘ್ರವೇ ಸಭೆಗೆ ದಿನ ನಿಗದಿಪಡಿಸುತ್ತೇವೆ. ಎಲ್ಲೆಲ್ಲಿ ಏನಾಗಿದೆ ಎನ್ನುವ ಸತ್ಯಶೋಧನೆ ಮತ್ತು ಪರಿಹಾರ ಹುಡುಕುವ ಕೆಲಸ ಮಾಡುತ್ತೇವೆ’ ಎಂದೂ ಹೇಳಿದರು.

    ಕರ್ನಾಟಕ, ಹಿಮಾಚಲ ಪ್ರದೇಶದಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿರುವುದಕ್ಕೆ ಎಐಸಿಸಿ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿರುವ ಬಗ್ಗೆ ಪ್ರಸ್ತಾಪಿಸಿದಾಗ, ‘ನಾವು 14- 15 ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿತ್ತು. ಆದರೆ, ನಿರೀಕ್ಷಿತ ಸ್ಥಾನಗಳನ್ನು ಗಳಿಸಲು ವಿಫಲರಾಗಿದ್ದೇವೆ. ಜನರ ತೀರ್ಪಿಗೆ ನಾವು ತಲೆಬಾಗಲೇ ಬೇಕು’ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *